ಡಿಕೆಶಿ ಅಭಿಮಾನಿಗಳಿಗೆ ಟ್ರಬಲ್ ಶೂಟರ್ ಕಡೆಯಿಂದ ಭರ್ಜರಿ ಗುಡ್ ನ್ಯೂಸ್.?

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡು ಎರಡು ತಿಂಗಳು ಕಳೆದರೂ ಅಧಿಕಾರ ಸ್ವೀಕರಿಸದೆ ಇರುವ ಡಿ.ಕೆ.ಶಿವಕುಮಾರ್ ಅವರು ಈ ತಿಂಗಳಾಂತ್ಯದಲ್ಲಿ ಅಧಿಕಾರ ಸ್ವೀಕರಿಸುವ ಚಿಂತನೆಯಲ್ಲಿದ್ದಾರೆ. ಮಾ.11ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದರು.

ನೇಮಕವಾದ ದಿನದಿಂದಲೇ ಚಟುವಟಿಕೆ ಆರಂಭಿಸಿದ ಡಿ.ಕೆ.ಶಿವಕುಮಾರ್ ಅವರು, ಕೊರೊನಾ ನಿಯಂತ್ರಣ ಪರಿಸ್ಥಿತಿಯ ಅವಲೋಕನಕ್ಕೆ ಮಾಜಿ ಸಚಿವ ರಮೇಶ್ ಕುಮಾರ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿದರು.
ಕೊರೊನಾ ನಿಧಿ ಸ್ಥಾಪಿಸಿ ಮುಕ್ತವಾಗಿ ದೇಣಿಗೆ ನೀಡುವಂತೆ ಕರೆ ನೀಡಿದರು. ಅದರಂತೆ ಶಾಸಕರು, ಕಾರ್ಯಕರ್ತರು ವ್ಯಾಪಕ ದೇಣಿಗೆ ನೀಡಿದರು. ಅಧಿಕಾರ ಸ್ವೀಕರಿಸದೆ ಇದ್ದರೂ ಅಧ್ಯಕ್ಷರಾಗಿ ಅತ್ಯಂತ ಚುರುಕಿನಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಅಧಿಕಾರ ಸ್ವೀಕರಿಸುವುದು ಆಡಳಿತಾತ್ಮಕವಾಗಿ ಅತ್ಯಂತ ಪ್ರಮುಖವಾಗಿದೆ.

ಇತ್ತೀಚೆಗೆ ವಲಸೆ ಪ್ರಯಾಣಿಕರ ಪ್ರಯಾಣ ವೆಚ್ಚ ಭರಿಸಲು ಪಕ್ಷ ಸಿದ್ದವೆಂದು ಘೋಷಣೆ ಮಾಡಿದ ಡಿ.ಕೆ.ಶಿವಕುಮಾರ್ ಅವರು ಅದಕ್ಕಾಗಿ ಕಳುಹಿಸಿದ ಒಂದು ಕೋಟಿ ರೂಪಾಯಿಯ ಚೆಕ್‍ನಲ್ಲಿ ಹಿಂದಿನ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರ ಸಹಿಯಿತ್ತು.

ಆಡಳಿತಾತ್ಮಕವಾಗಿ ದಾಖಲೆಗಳಲ್ಲಿ ಡಿ.ಕೆ.ಶಿವಕುಮಾರ್ ಇನ್ನೂ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿಲ್ಲ. ಮೂರು ದಿನಗಳ ಹಿಂದೆ ಪಕ್ಷದ ಹಿರಿಯ ನಾಯಕರ ಸಭೆ ಕರೆದು ಚರ್ಚೆ ನಡೆಸಿದರು. ಅಲ್ಲಿ ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕುರಿತು ಚರ್ಚೆ ನಡೆಸಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ನಾಯಕರನ್ನು ಕರೆದು ಬೃಹತ್ ಸಮಾವೇಶ ನಡೆಸಿ ಅಧಿಕಾರ ಸ್ವೀಕರಿಸುವ ಇಚ್ಚೆ ಡಿ.ಕೆ.ಶಿವಕುಮಾರ್ ಅವರಲ್ಲಿತ್ತು. ಆದರೆ ಕೊರೊನಾ ಸಂದರ್ಭದಲ್ಲಿ ಆ ರೀತಿಯ ಸಮಾರಂಭಗಳಿಗೆ ಅವಕಾಶ ಇಲ್ಲವಾಗಿದೆ. ಹಾಗಾಗಿ ಸರಳ ಕಾರ್ಯಕ್ರಮದಲ್ಲೇ ಅಧಿಕಾರ ಸ್ವೀಕರಿಸುವಂತೆ ಹಿರಿಯ ನಾಯಕರು ಸಲಹೆ ನೀಡಿದ್ದಾರೆ.

ಮೂಲಗಳ ಪ್ರಕಾರ ಈ ತಿಂಗಳ 31ಕ್ಕೆ ಅಧಿಕಾರ ಸ್ವೀಕರಿಸುವುದು, ಕೊರೊನಾ ಮುಗಿದ ಬಳಿಕ ಬೃಹತ್ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಆಡಳಿತಾತ್ಮಕವಾಗಿ ಅಧಿಕೃತ ಕಾಗದ ಪತ್ರಗಳಿಗೆ ಸಹಿ ಹಾಕಲು ಅವಕಾಶ ಇಲ್ಲದೆ ಇರುವುದರಿಂದ ಪಕ್ಷ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಹಾಗಾಗಿ ಸಮಾವೇಶಕ್ಕೆ ಕಾಯದೆ ಅಧಿಕಾರ ಸ್ವೀಕರಿಸಲು ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗಿದೆ.

Comments