ಹೆಚ್‌ಡಿ ದೇವೇಗೌಡ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ಏರಿದ ಕರ್ನಾಟಕದ ಏಕೈಕ ರಾಜಕಾರಣಿ. ದೇವೇಗೌಡರ ಬದುಕಿನ ಅದ್ಬುತ ಘಟನೆಗೆ ಈಗ 25 ವರ್ಷದ ಸಂಭ್ರಮ.
ಮಣ್ಣಿನ ಮಗ ದೇವೇಗೌಡ ಭಾರತದ ಪ್ರಧಾನಿ ಗದ್ದುಗೆ ಏರಿ ಜೂನ್ 1 2020ಕ್ಕೆ ಸರಿಯಾಗಿ 25 ವರ್ಷ ಕಳೆದಿದೆ. ಈ ಸಂಭ್ರಮವನ್ನು ದೇವೇಗೌಡರ ಮೊಮ್ಮಗ, ನಟ ನಿಖಿಲ್ ಕುಮಾರ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
''ಭಾರತದ ಹಾಗೂ ಈ ಕನ್ನಡ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ ಹೆಚ್‌ಡಿ ದೇವೇಗೌಡ ದೆಹಲಿಯ ಗದ್ದುಗೆ ಏರಿ ಇಂದಿಗೆ 25 ವರ್ಷಗಳಾದವು. ಸಾಮಾನ್ಯ ರೈತ ಕುಲದಲ್ಲಿ ಜನಿಸಿದರೂ ಅತ್ಯುನ್ನತ ಹುದ್ದೆ ಏರಿದ ಈ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿಯಾಗಲಿ.'' ಎಂದು ಟ್ವಿಟ್ಟರ್‌ನಲ್ಲಿ ನಿಖಿಲ್ ಕುಮಾರ್ ಬರೆದುಕೊಂಡಿದ್ದಾರೆ.
1 ಜೂನ್ 1996 ರಲ್ಲಿ ಭಾರತದ 11ನೇ ಪ್ರಧಾನ ಮಂತ್ರಿಯಾಗಿ ದೇವೇಗೌಡ ಅಧಿಕಾರ ಸ್ವೀಕಾರ ಮಾಡಿದ್ದರು. ಅಲ್ಲಿಂದ 21 ಏಪ್ರಿಲ್ 1997ರವರೆಗೆ, 10 ತಿಂಗಳ ಕಾಲ ಭಾರತದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.
1994 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರಿಗೆ ಎರಡು ವರ್ಷದಲ್ಲಿ ಪ್ರಧಾನಿಯಾಗುವ ಭಾಗ್ಯ ಸಿಕ್ಕಿತು. 1996ರಲ್ಲಿ ಲೋಕಸಭೆಯಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಸ್ಪಷ್ಟ ಬಹುಮತವಿರಲಿಲ್ಲ. ಆಗ ಅನೇಕ ರಾಜಕೀಯ ಪಕ್ಷಗಳ ಮೈತ್ರಿತ್ವವಾದ ತೃತೀಯ ರಂಗ ದೇವೇಗೌಡರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಿತು.
ಈವರೆಗೂ ಕರ್ನಾಟಕದಿಂದ ಪ್ರಧಾನ ಮಂತ್ರಿಯಾದ ಏಕೈಕ ರಾಜಕಾರಣಿ ಎಂದು ಖ್ಯಾತಿಯನ್ನು ದೇವೇಗೌಡರು ಪಡೆದಿದ್ದಾರೆ. ಇದು ಕರ್ನಾಟಕಕ್ಕೆ ಹಮ್ಮೆಯ ವಿಷಯವಾಗಿದೆ. ಮುಂದೆ ಈ ಕರ್ನಾಟಕದ ಯಾವ ರಾಜಕಾರಣಿಗೆ ಪ್ರಧಾನಿಯಾಗುವ ಅವಕಾಶ ಸಿಗುತ್ತದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
Comments
Post a Comment