ನವದೆಹಲಿ: ಕೊರೊನಾ ಆತಂಕ ಶುರುವಾದಾಗಿನಿಂದಲೂ ಅದನ್ನ ಮೆಟ್ಟಿ ನಿಲ್ಲುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮ ವಹಿಸುತ್ತಲೇ ಇವೆ. ಇದರ ಜೊತೆ ಜೊತೆಗೆ ಸರ್ಕಾರಗಳನ್ನ ಕಾಡುತ್ತಿರುವ ಮತ್ತೊಂದು ದೊಡ್ಡ ಸವಾಲು ಅಂದ್ರೆ ಅದು ಆರ್ಥಿಕತೆ. ಕೊರೊನಾದಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿದ್ದು, ಇದು ಆರ್ಥಿಕತೆಗೂ ಪೆಟ್ಟು ನೀಡಿದೆ. ಈಗ ದೇಶದಲ್ಲಿ ಲಾಕ್ಡೌನ್ನ ಎರಡನೇ ಹಂತವೂ ಪೂರ್ಣಗೊಳ್ಳುತ್ತಿದ್ದು, ಆರ್ಥಿಕತೆಯನ್ನ ಹೆಚ್ಚಿಸುವ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಿವೆ. ಈ ನಿಟ್ಟಿನಲ್ಲಿ ವಿದೇಶಿ ಕಂಪನಿಗಳನ್ನ ಭಾರತಕ್ಕೆ ಸೆಳೆಯಲು ಸಿದ್ಧರಾಗಿ ಅಂತ ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳಿಗೂ ಕರೆ ಕೊಟ್ಟಿದ್ದಾರೆ.
ಕೊರೊನಾ ವೈರಸ್ನ ಮೂಲ ತಾಣವಾದ ವುಹಾನ್ ಚೀನಾದಲ್ಲಿದ್ದು, ಸದ್ಯ ನೆರೆ ರಾಷ್ಟ್ರದಿಂದ ಹಲವು ಉದ್ಯಮಗಳು ಕಾಲ್ಕಿತ್ತುತ್ತಿವೆ. ಹೀಗೆ ಚೀನಾ ತೊರೆಯುತ್ತಿರುವ ಕಂಪನಿಗಳನ್ನ ಭಾರತಕ್ಕೆ ಸೆಳೆಯಬೇಕು ಅಂತ ನಿನ್ನೆ ನಡೆದ ಸಿಎಂಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಮೋದಿ ಹೇಳಿದ್ದಾರೆ ಅಂತ ತಿಳಿದು ಬಂದಿದೆ. ಭಾರತದಲ್ಲಿ ಹೂಡಿಕೆದಾರರನ್ನ ಸೆಳೆಯೋಕೆ ಎಲ್ಲ ರಾಜ್ಯಗಳೂ ಸಿದ್ಧವಾಗಿರಬೇಕು. ಅತ್ಯುತ್ತಮ ಮಾನವ ಸಂಪನ್ಮೂಲ ಹಾಗೂ ಅತ್ಯಾಧುನಿಕ ಮೂಲ ಸೌಕರ್ಯವನ್ನ ಹೊಂದಿರುವ ಭಾರತ ವಿದೇಶಿ ಕಂಪನಿಗಳಿಗೆ ಪರ್ಯಾಯ ಆಯ್ಕೆ ಆಗಬೇಕಿದೆ.
ಕೊರೊನಾ ಆತಂಕ ಕಡಿಮೆ ಆದ ಬಳಿಕ ಹಲವು ಉದ್ಯಮಗಳು ಚೀನಾವನ್ನ ಹೊರತುಪಡಿಸಿ ಬೇರೆಲ್ಲಿ ಅವಕಾಶವಿದೆ ಅಂತ ಹುಡುಕುತ್ತವೆ. ಹೀಗಾಗಿ ಭಾರತದಲ್ಲಿ ಅವರು ಹೂಡಿಕೆ ಮಾಡಲು ಅವಶ್ಯಕತೆ ಇರುವ ವಾತಾವರಣ ನಿರ್ಮಿಸಲು ಎಲ್ಲ ರಾಜ್ಯಗಳೂ ಸಿದ್ಧತೆಗಳನ್ನ ಮಾಡಿಕೊಳ್ಳಬೇಕಿದೆ ಅಂತ ಮೋದಿ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Comments
Post a Comment