ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ವರಿಷ್ಠರಿಗೆ ಅತ್ಯಾಪ್ತರಿಂದಲೇ ದೂರು ನೀಡಲು ಪ್ರಯತ್ನ ನಡೆದಿದೆ ಎನ್ನಲಾಗಿದೆ. ಯಡಿಯೂರಪ್ಪ, ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಅತ್ಯಾಪ್ತರಿಂದಲೇ ದೂರಿನ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಲಾಗಿದೆ ಎಂದು ಹೇಳಲಾಗಿದೆ. ಕಳೆದ ಎರಡು, ಮೂರು ತಿಂಗಳಿನಿಂದ ಮುಖ್ಯಮಂತ್ರಿ ಅವರಿಂದ ದೂರ ಉಳಿದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಎರಡು ಬಾರಿ ಮುಖ್ಯಮಂತ್ರಿ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ದೂರು ನೀಡಲು ಪ್ರಯತ್ನ ನಡೆಸಿದ್ದಾರೆ.
ಸಂತೋಷ್ ಮತ್ತು ಯೋಗೇಶ್ವರ್ ಸಿಎಂ ವಿರುದ್ಧ ವರಿಷ್ಠರಿಗೆ ದೂರು ನೀಡಲು ದೆಹಲಿಗೆ ಹೋಗಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಗೆ ಸಮಯ ಸಿಗದ ಹಿನ್ನಲೆಯಲ್ಲಿ ವಾಪಸ್ ಬಂದಿದ್ದಾರೆ. ಆಪರೇಷನ್ ಕಮಲ ಸೇನಾನಿಗಳಿಂದಲೇ ಮುಖ್ಯಮಂತ್ರಿ ವಿರುದ್ಧ ದೂರು ನೀಡಲು ಪ್ರಯತ್ನ ನಡೆದಿರುವುದು ಚರ್ಚೆಗೆ ಕಾರಣವಾಗಿದೆ. 25 ದಿನಗಳ ಹಿಂದೆ ದೂರಿನ ಪಟ್ಟಿಯೊಂದಿಗೆ ತೆರಳಿದ್ದ ಅವರು ವರಿಷ್ಠರ ಭೇಟಿಯಾಗದೆ ವಾಪಸ್ಸಾಗಿದ್ದಾರೆ. ಯಡಿಯೂರಪ್ಪ ಬಜೆಟ್ ಮಂಡನೆ ಬಳಿಕ ಮತ್ತೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗುವಲ್ಲಿ ಇಬ್ಬರೂ ನಾಯಕರು ಪ್ರಮುಖ ಪಾತ್ರ ವಹಿಸಿದ್ದು ಈಗ ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇರೆ ರೀತಿಯ ಬೆಳವಣಿಗೆ ನಡೆದಿವೆ ಎನ್ನಲಾಗಿದೆ. ಉತ್ತರ ಕರ್ನಾಟಕದ ಶಾಸಕರು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರ ಮತ್ತು ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನುದಾನ ನೀಡದ ಬಗ್ಗೆ ಅಸಮಾಧಾನಗೊಂಡಿದ್ದು, ಸೋಮವಾರ ಇಲ್ಲವೇ ಮಂಗಳವಾರ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಬಜೆಟ್ ಬಳಿಕ ತೆರೆಮರೆಯಲ್ಲಿ ಚಟುವಟಿಕೆ ನಡೆಯುತ್ತಿದ್ದು ಮುಂದೇನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Comments
Post a Comment