ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರನ್ನಾಗಿ ಪಕ್ಷದ ಮುಖಂಡ ಅಜಯ್ ಕುಮಾರ್ ಲಲ್ಲೂ ಅವರನ್ನು ನೇಮಕ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಾಲಿವುಡ್ ನಟ ರಾಜ್ ಬಬ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿ ಸಂಸದ ಬಬ್ಬರ್, ಸೋಲಿನ ಹೊಣೆ ಹೊತ್ತು ಮೇ ತಿಂಗಳಲ್ಲೇ ರಾಜೀನಾಮೆ ನೀಡಿದ್ದರು.
ಪ್ರಿಯಾಂಕಾಗಾಂಧಿ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಚಾರದ ನಡುವೆಯೂ ರಾಜ್ಯದ 80 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಏಕೈಕ ಸ್ಥಾನದಲ್ಲಿ ಜಯ ಸಾಧಿಸಿತ್ತು. ಸೋನಿಯಾಗಾಂಧಿ ರಾಯಬರೇಲಿ ಕ್ಷೇತ್ರದಿಂದ ಜಯ ಸಾಧಿಸಿದ ಏಕೈಕ ಕಾಂಗ್ರೆಸ್ ಅಭ್ಯರ್ಥಿ.
ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಜಯ್ ಕುಮಾರ್ ಲಲ್ಲೂ, ತಮ್‌ಕುಹಿ ರಾಜ್ ಕ್ಷೇತ್ರವನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಗಾತ್ರವನ್ನು ಕೂಡಾ ಗಣನೀಯವಾಗಿ ಕಡಿಮೆ ಮಾಡಿದ್ದು, 500 ಮುಖಂಡರ ಬದಲು 40-45ಕ್ಕೆ ಸೀಮಿತಗೊಳಿಸಿದೆ. ಯುವಕರಿಗೆ ಆದ್ಯತೆ ನೀಡಲಾಗಿದೆ.
2022ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಹಿರಿಯ ಮುಖಂಡರಾದ ಸಲ್ಮಾನ್ ಖುರ್ಷಿದ್, ಪಿ.ಎಲ್.ಪೂನಿಯಾ, ಪ್ರಮೋದ್ ತಿವಾರಿ ಹಾಗೂ ಆರ್‌ಪಿಎನ್ ಸಿಂಗ್ ಅವರನ್ನೊಳಗೊಂಡ ಸಲಹಾ ಮಂಡಳಿ ರಚಿಸಲಾಗಿದೆ. ಈ ಗುಂಪಿಗೆ ಪ್ರಿಯಾಂಕಾಗಾಂಧಿ ಮುಖ್ಯಸ್ಥೆ. ಕಾರ್ಯತಂತ್ರ ಹಾಗೂ ಯೋಜನೆಗೆ ಎಂಟು ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಪಕ್ಷದ ಪ್ರಕಟಣೆ ಹೇಳಿದೆ. ಈ ಮಧ್ಯೆ ರಾಂಪುರ ಖಾಸ್ ಕ್ಷೇತ್ರದ ಶಾಸಕಿ ಆರಾಧನಾ ಮಿಶ್ರಾ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.
Comments
Post a Comment