ನಿರಂತರವಾಗಿ ಪರಸ್ಪರ ವಾಗ್ದಾಳಿಗಳನ್ನು ನಡೆಸುವ ಮೂಲಕ ಸುದ್ದಿಯಾಗುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬುಧವಾರ ನಗುನಗುತ್ತಾ ಎದುರಾದರು. ಸುದೀರ್ಘ ಸಮಯ ಮಾತುಕತೆ ನಡೆಸಿದರು. ವಾಡಿಕೆಯಂತೆ ದೀದಿ ಅವರು ಮೋದಿ ಅವರಿಗೆ ಕುರ್ತಾವನ್ನು ಉಡುಗೊರೆಯನ್ನಾಗಿ ನೀಡಿದರು. ಜತೆಗೆ ಬಂಗಾಳದ ಸಿಹಿಯನ್ನು ಕೂಡ ಕೊಟ್ಟು ದ್ವೇಷ ಮರೆತರು.
ನವದೆಹಲಿಯ ಪ್ರಧಾನಿ ನಿವಾಸಕ್ಕೆ ತೆರಳಿದ ಮಮತಾ ಬ್ಯಾನರ್ಜಿ, ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರೊಂದಿಗಿನ ಮಾತುಕತೆ ತೃಪ್ತಿದಾಯಕವಾಗಿತ್ತು ಮತ್ತು ಫಲಪ್ರದವಾಗಿತ್ತು ಎಂದು ತಿಳಿಸಿದರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೆಯ ಬಾರಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು. ಮೋದಿ ಅವರ ಜನ್ಮದಿನಕ್ಕೆ ಮಮತಾ ಬ್ಯಾನರ್ಜಿ ಶುಭ ಹಾರೈಸಿದ್ದರು. ಸದಾ ಮೋದಿ ವಿರುದ್ಧ ಕಿಡಿಕಾರುತ್ತಿದ್ದ ಮಮತಾ ಅವರಲ್ಲಿನ ಈ ಬದಲಾವಣೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.
ಇದೇ ಸಂದರ್ಭದಲ್ಲಿ ಮಮತಾ, ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿ ಸ್ಥಾಪಿಸಲಾಗಿರುವ ಕಲ್ಲಿದ್ದಲು ಫೀಲ್ಡ್ ಪ್ರಾಜೆಕ್ಟ್‌ಗೆ ಚಾಲನೆ ನೀಡಲು ಆಗಮಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡಿದರು. 'ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗುತ್ತಿರುವ ಜಗತ್ತಿನ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಬ್ಲಾಕ್‌ಅನ್ನು ಉದ್ಘಾಟಿಸಲು ಆಗಮಿಸುವಂತೆ ಮೋದಿ ಅವರಿಗೆ ಮನವಿ ಮಾಡಿದ್ದೇನೆ' ಎಂದು ಹೇಳಿದರು.
Comments
Post a Comment