'ಬಿಜೆಪಿ ಸರ್ಕಾರ ಇನ್ನು ನಾಲ್ಕು ತಿಂಗಳಷ್ಟೇ ಅಧಿಕಾರದಲ್ಲಿ ಇರುತ್ತದೆ' ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದ್ದಿದ್ದಾರೆ. ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ವಾಗ್ದಾಳಿಯನ್ನೇ ನಡೆಸಿದರು. 'ನಾನು ಪಾಪದ ಹಣ ಸಂಗ್ರಹಿಸಿ 20 - 30 ಕೋಟಿ ಹಣವನ್ನು ನೀಡಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಸರ್ಕಾರ ಉಳಿಸಿಕೊಳ್ಳುವುದು ನನಗೆ ದೊಡ್ಡ ವಿಷಯವಾಗಿರಲಿಲ್ಲ. ಆದರೆ, ಅದರ ಅವಶ್ಯಕತೆ ನನಗೆ ಇರಲಿಲ್ಲ' ಎಂದು ಎಚ್.ಡಿ.ಕೆ ವಿವರಿಸಿದರು. ಅಲ್ಲದೇ, ತಾವು ರಾಜೀನಾಮೆ ಕೊಟ್ಟು ಸಂತೋಷವಾಗಿಯೇ ಹೊರಬಂದೆ ಎಂದು ಹೇಳಿದರು.
ಇನ್ನು 'ಮೈತ್ರಿ ಸರ್ಕಾರ ನನ್ನ ಪಕ್ಷದ ಸರ್ಕಾರ ಆಗಿರಲಿಲ್ಲ. ಸರ್ಕಾರ ಈಗ ಬೀಳುತ್ತದೆ, ಆಗ ಬೀಳುತ್ತದೆ ಅಂತಿದ್ದರು. ಆಪರೇಷನ್ ಕಮಲ ಭೀತಿ ಬೇರೆ ಇತ್ತು. ಮತ್ತೊಂದೆಡೆ ಕಾಂಗ್ರೆಸ್ ನವರು ತಮ್ಮ ಸರ್ಕಾರ ಅಸ್ತಿತ್ವದಲ್ಲಿ ತಂದಿದ್ದ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು ಪಟ್ಟುಹಿಡಿದಿದ್ದರು. ಇನ್ನೊಂದೆಡೆ ನಾನು ಹೋದಲೆಲ್ಲ ಸಾಲಮನ್ನಾ ಮಾಡಲಿಲ್ಲ ಎಂದು ಗದಾಪ್ರಹಾರ ನಡೆಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಹತ್ತಾರು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಅತ್ಯಂತ ಕೆಟ್ಟ ಪರಿಸ್ಥಿತಿಯಿತ್ತು. ಸರ್ಕಾರ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ' ಎಂದು ಕುಮಾರಸ್ವಾಮಿ ಕಿಡಿಕಾರಿದರು. ಇದೇ ವೇಳೆ, ಸಹಕಾರಿ ಬ್ಯಾಂಕ್ ಹಣ ಕೊಟ್ಟಾಗಿದೆ. ನೀವು ಪ್ರಿಂಟ್ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಅವರಿಗೆ ಹೇಳಿ ಎಂದು ಅಲ್ಲಿಯೇ ಇದ್ದ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರನ್ನು ಕುಟುಕಿದರು…
Comments
Post a Comment