ಕರ್ನಾಟಕದ ಮೈತ್ರಿ ಸರ್ಕಾರವನ್ನು ಪತನಗೊಳಿಸಿರುವ ಬಿಜೆಪಿ ಬೆಂಗಳೂರಿನ ಮೇಲೆ ಕಣ್ಣಿಟ್ಟಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ಪಡೆಯಲು ಆಪರೇಷನ್ ಕಮಲ ನಡೆಸುವ ಸಾಧ್ಯತೆ ಇದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. 4ನೇ ಅವಧಿ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಮುಗಿಯುತ್ತಾ ಬಂದಿದೆ. ಸೆಪ್ಟೆಂಬರ್‌ನಲ್ಲಿ ನೂನತ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.
ಬೆಂಗಳೂರಿನ ಮೂವರು ಕಾಂಗ್ರೆಸ್ ಶಾಸಕರು, ಒಬ್ಬರು ಜೆಡಿಎಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಈ ಬಾರಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಲ್ಲಿ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಲಿದೆಯೇ? ಕಾದು ನೋಡಬೇಕು. ರಾಜರಾಜೇಶ್ವರಿ ನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಈ ಕುರಿತು ಮಾತನಾಡಿದ್ದು, "ನಾಲ್ಕು ವರ್ಷಗಳ ಹಿಂದೆಯೇ ಬಿಜೆಪಿಗೆ ಮೇಯರ್ ಪಟ್ಟ ಸಿಗಬೇಕಿತ್ತು. ಅದಕ್ಕೆ ಕಾರಣಿಕರ್ತರು ಯಾರು ಎಂಬುದು ಎಲ್ಲರಿಗೂ ಗೊತ್ತು. ಈ ಬಾರಿ ಯಾರಿಗೆ ಹೆಚ್ಚಿನ ಮತ ಸಿಗಲಿದೆಯೋ ಅವರು ಮೇಯರ್ ಆಗುತ್ತಾರೆ" ಎಂದು ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಒಟ್ಟು 198 ವಾರ್ಡ್‌ಗಳಿವೆ. ಬಿಜೆಪಿ 101 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನದಲ್ಲಿ ಜಯಗಳಿಸಿವೆ. 7 ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಿಜೆಪಿ ದೊಡ್ಡ ಪಕ್ಷ ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಅಧಿಕಾರ ಕಳೆದುಕೊಂಡಿದೆ.
Comments
Post a Comment