ಇದೀಗ ಬಂದ ಸುದ್ದಿ: ಕೇಂದ್ರ ಇಬ್ಬರು ಸಚಿವರಿಂದಾಗಿ ಟ್ರಬಲ್ ಶೂಟರ್ ಶಿವಕುಮಾರ್ ಸೇಫ್.?

ಇಡಿ ಅಧಿಕಾರಿಗಳಿಂದ ಶುಕ್ರವಾರ ಹೇಗೋ ಡಿಕೆ ಶಿವಕುಮಾರ್ ಅವರು ಬಚಾವ್ ಆಗಿದ್ದು, ಟ್ರಬಲ್ ಶೂಟರ್ ನೆರವಿಗೆ ಕಾಂಗ್ರೆಸ್ ನಾಯಕರು ಯಾರು ಬರಲಿಲ್ಲ. ಆದರೆ ಇಬ್ಬರು ನಾಯಕರಿಂದಾಗಿ ಮಾಜಿ ಸಚಿವರು ಬಚಾವ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು. ಡಿ.ಕೆ ಶಿವಕುಮಾರ್ ಅವರನ್ನು ಬಂಧನದ ಸಂಕಷ್ಟದಿಂದ ಕೇಂದ್ರದ ಇಬ್ಬರು ಸಚಿವರುಗಳು ಪಾರು ಮಾಡಿದ್ದಾರೆ. ಆ ಇಬ್ಬರು ಸಚಿವರು ಡಿ.ಕೆ ಶಿವಕುಮಾರ್ ಜೊತೆ ವ್ಯಾವಹಾರಿಕ ಕಾರಣಗಳಿಂದಾಗಿ ಆಪ್ತ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ.

ತಮಗೆ ಇಡಿ ಸಂಕಷ್ಟ ಎದುರಾಗುತ್ತಿದ್ದಂತೆ ಡಿಕೆಶಿ ಆ ಇಬ್ಬರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ. ಆ ಪವರ್ ಫುಲ್ ಸಚಿವರುಗಳೊಂದಿಗಿನ ವ್ಯಾವಹಾರಿಕ ಸಂಬಂಧವೇ ಡಿಕೆಶಿಯವರನ್ನು ಬಂಧನದ ಭೀತಿಯಿಂದ ಪಾರು ಮಾಡಿದೆ ಎಂಬ ಮಾತುಗಳು ದೆಹಲಿ ಮಟ್ಟದಲ್ಲಿ ಕೇಳಿ ಬರುತ್ತಿವೆ. ಆದರೆ  ಆ ಇಬ್ಬರು ಕೇಂದ್ರ ಸಚಿವರ ಹೆಸರು ತಿಳಿದುಬಂದಿಲ್ಲ.

ಇಡಿ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ರಾಜ್ಯ ಕಾಂಗ್ರೆಸ್ ನಾಯಕರು ಈ ಹಿಂದೆಯೂ ನನ್ನ ಬೆಂಬಲಕ್ಕೆ ಬಂದಿರಲಿಲ್ಲ. ನನ್ನ ಮೇಲೆ ಐಟಿ ರೇಡ್ ಆದಾಗ ನಮ್ಮ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದು ಹೇಳಿ ರಾಜ್ಯ ನಾಯಕರಿಗೆ ಟಾಂಗ್ ನೀಡಿದ್ದರು.

ಡಿಕೆ ಶಿವಕುಮಾರ್ ಅವರಿಂದ ಈ ಹೇಳಿಕೆ ಪ್ರಕಟವಾದ ಕೂಡಲೇ ಡಿಕೆಶಿ ಪರವಾಗಿ ಮಾತನಾಡಲು ದಿನೇಶ್ ಗುಂಡೂರಾವ್ ಮುಂದಾಗಿದ್ದರು. ಅಲ್ಲದೆ ನಿನ್ನೆ ಮಧ್ಯಾಹ್ನ 1:10ಕ್ಕೆ ಸಿದ್ದರಾಮಯ್ಯ ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಸಿಬಿಐ, ಇಡಿ ಮೊದಲಾದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ದುರುಪಯೋಗ ಮಾಡುತ್ತಿರುವುದು ಖಂಡನೀಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕೇ ಹೊರತು ಹೀಗೆ ಅಧಿಕಾರ ದುರ್ಬಳಕೆ ಮೂಲಕ ಅಲ್ಲ ಎಂದು ಟೀಕಿಸಿದ್ದಾರೆ. ಆದರೆ ಟ್ವೀಟ್ ನಲ್ಲಿ ಎಲ್ಲಿಯೂ ಡಿಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪ ಮಾಡಿರಲಿಲ್ಲ.

ಗುರುವಾರ ರಾತ್ರಿ ಡಿಕೆಶಿ ನಿವಾಸಕ್ಕೆ ಮಾಜಿ ಸಂಸದ ಶಿವರಾಮೇಗೌಡ ಆಗಮಿಸಿದ್ದರು. ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ನಾರಾಯಣ ಗೌಡ ಭೇಟಿ ನೀಡಿ ಮಾತನಾಡಿದ್ದರು. ಆದರೆ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಪ್ರಮುಖ ನಾಯಕರು ಡಿಕೆ ಶಿವಕುಮಾರ್ ನಿವಾಸಕ್ಕೆ ಬಂದಿರಲಿಲ್ಲ.

Comments