ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾಗಿ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಈಗ ಇನ್ನೊಂದು ಯಶಸ್ಸು ಸಾಧಿಸಿದೆ. ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಬಿಜೆಪಿಯು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿತ್ತು. ಈ ಅಭಿಯಾನದಲ್ಲಿ ನಿರೀಕ್ಷೆಗೂ ಮೀರಿ ಹೊಸಬರನ್ನು ಸದಸ್ಯರನ್ನಾಗಿ ಮಾಡಿಕೊಂಡಿದೆ. ಬಿಜೆಪಿ ನೀಡಿರುವ ಮಾಹಿತಿಯ ಪ್ರಕಾರ 3.78 ಕೋಟಿ ಹೊಸ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗಿದೆ. ಅಭಿಯಾನದಲ್ಲಿ 2.2 ಕೋಟಿ ಹೊಸ ಸದಸ್ಯರ ನೋಂದಣಿಯ ಗುರಿ ಹೊತ್ತಿದ್ದ ಬಿಜೆಪಿ ನಿರೀಕ್ಷೆಗಿಂತ 1.6 ಕೋಟಿ ಹೆಚ್ಚು ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳ ಕಾಲ ದೇಶಾದ್ಯಂತ ನಡೆದ ಸದಸ್ಯತ್ವ ಅಭಿಯಾನ ಮಂಗಳವಾರ ಕೊನೆಗೊಂಡಿದೆ.
ಈ ಕುರಿತು ಪಕ್ಷದ ಉಪಾಧ್ಯಕ್ಷ, ಸದಸ್ಯತ್ವ ಅಭಿಯಾನದ ಸಹಸಂಚಾಲಕ ದುಶ್ಯಂತ್ ಕುಮಾರ್ ಗೌತಮ್ ಪ್ರತಿಕ್ರಿಯಿಸಿ, ದೇಶದ ವಿವಿಧ ಭಾಗಗಳಿಂದ ಮತ್ತಷ್ಟುಅಂಕಿ-ಅಂಶ ಬರಬೇಕಿರುವ ಕಾರಣ ನೂತನ ಸದಸ್ಯರ ಸಂಖ್ಯೆ ಮುಂದಿನ ನಾಲ್ಕಾರು ದಿನಗಳಲ್ಲಿ 5 ಕೋಟಿ ದಾಟಬಹುದೆನ್ನುವ ವಿಶ್ವಾಸ ಮೂಡಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜುಲೈ 6, ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದಂದು ವಾರಾಣಸಿ ಮತ್ತು ತೆಲಂಗಾಣದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು ಎಂದು ಹೇಳಿದರು.
2015ರ ಸದಸ್ಯತ್ವ ಅಭಿಯಾನದ ವೇಳೆ ಮಿಸ್ಡ್ ಕಾಲ್ ನೀಡುವ ಮೂಲಕ 11 ಕೋಟಿ ಮಂದಿ ಬಿಜೆಪಿ ಸದಸ್ಯತ್ವ ಪಡೆದಿದ್ದರು. ಆದರೆ ಬಹುತೇಕ ಮಂದಿಯ ವಿವರ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಎಚ್ಚರಿಕೆ ವಹಿಸಿದೆ. ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಪಡೆದವರ ಹೆಸರು, ವಿಳಾಸ, ಅಂಚೆ ಪಿನ್‌ಕೋಟ್, ದೂರವಾಣಿ ಸಂಖ್ಯೆಗಳನ್ನು ಪಡೆದ ಬಳಿಕವಷ್ಟೇ ಸದಸ್ಯತ್ವ ನೀಡಿದೆ ಎಂದು ಮೂಲಗಳು ತಿಳಿಸಿವೆ.
Comments
Post a Comment