ಇದೀಗ ಬಂದ ಸುದ್ದಿ: ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ ಕರ್ನಾಟಕದ ಪ್ರಭಾವಿ ಬಿ ಎಲ್ ಸಂತೋಷ್.?

ಭಾರತೀಯ ಜನತಾ ಪಕ್ಷ(ಬಿಜೆಪಿ) ಹುಟ್ಟಿದ್ದೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಮತ್ತು ಪಕ್ಷ ಬೆಳೆದಿದ್ದೇ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ(ಸಂಘಟನೆ) ಬಿ ಎಲ್ ಸಂತೋಷ್ ಅವರು ಶುಕ್ರವಾರ ಹೇಳಿದ್ದಾರೆ. ಆದರೆ ರಾಮಮಂದಿರ ಯಾವಾಗ ನಿರ್ಮಾಣವಾಗುತ್ತದೆ ಎಂಬುದು ಪ್ರಶ್ನೆ ಅಲ್ಲ, ಮಂದಿರ ನಿರ್ಮಾಣ ಶತ:ಸಿದ್ಧ. ಈ ಕಾರ್ಯವನ್ನು ಬಿಜೆಪಿ ಪೂರ್ಣಗೊಳಿಸಿಯೇ ತೀರುತ್ತದೆ ಎಂದು ಹೇಳಿದ್ದಾರೆ.

ಇಂದು ನಗರದ ಗಾಂಧಿ ಭವನದಲ್ಲಿ 'ಭಾರತಾಂಬೆಯ ಕಿರೀಟ ಕಾಶ್ಮೀರ-370ನೇ ವಿಧಿ ರದ್ದು' ಕುರಿತ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ‌ ದೇಶದ ಶೇ. 1ರಷ್ಟು ಜನಸಂಖ್ಯೆಗೆ ಶೇ. 11ರಷ್ಟು ಬಜೆಟ್ ಹಣವನ್ನು 60 ವರ್ಷಗಳಿಂದ ವ್ಯಯಿಸಲಾಗುತ್ತಿತ್ತು. ಆ ಹಣಕ್ಕೆ ಲೆಕ್ಕವೂ ಇಲ್ಲ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಲ್ಲಿಗೆ ಅನ್ವಯವಾಗುತ್ತಿರಲಿಲ್ಲ. ಅದಕ್ಕೆಲ್ಲಾ ಆಗಷ್ಟ್ 5 ರಂದು ಮೋದಿ-ಅಮಿತ್ ಶಾ ಪೂರ್ಣ ವಿರಾಮ ಹಾಕಿದ್ದಾರೆ ಎಂದರು.

ದೇಶದ ಮೊದಲನೇ ಪ್ರಧಾನಮಂತ್ರಿ ಮಾಡಿದ ಎಡವಟ್ಟನ್ನು ಹದಿನೆಂಟನೇ ಪ್ರಧಾನಿ ಸರಿಪಡಿಸಿದ್ದಾರೆ. ಮೊದಲ ಪ್ರಧಾನಿ ಯಿಂದಾದ ಹಲವಾರು ತಪ್ಪುಗಳನ್ನು ಸರಿಪಡಿಸುವ ಕೆಲಸವನ್ನು ಮೋದಿ ಅವರು ಒಂದೊಂದಾಗಿ ಅಡೆತಡೆಗಳನ್ನು ಮೀರಿ ಸರಿಪಡಿಸುತ್ತಿದ್ದಾರೆ. ವಿಶೇಷ ಸ್ಥಾನಮಾನದ 370 ವಿಧಿ ರದ್ದು ಮಾಡುವ ವಿಚಾರ ಸಚಿವಾಲಯದಲ್ಲಿ ಕೆಲಸ‌ ನಿರ್ವಹಿಸುತ್ತಿದ್ದ 40 ಅಧಿಕಾರಿಗಳಿಗೂ ಕೊನೆ ಘಳಿಗೆಯವರಗೆ ಗೊತ್ತಿರಲಿಲ್ಲ. ಅಷ್ಟು ರಹಸ್ಯವನ್ನು ಕಾಯ್ದುಕೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ, ಅಹಿಕರ ಘಟನೆ ನಡೆಯದಂತೆ, ನೆರೆಯ ಪಾಕಿಸ್ತಾನಕ್ಕೆ ಸುಳಿವೂ ಸಿಗದೆ ಸೂಕ್ಷ್ಮವಾಗಿ ವಿಧಿಯಡಿ ವಿಶೇಷ ಸ್ಥಾನಮಾನ ರದ್ದತಿ ಕಾರ್ಯ ಮಾಡಿ ಮುಗಿಸಲಾಗಿದೆ ಎಂದು ಅವರು ವಿವರಿಸಿದರು.

ಮನೆಗೆದ್ದು ಮಾರುಗೆಲ್ಲು ಎಂಬ ಗಾದೆಯನ್ನು ನೆಹರೂ ಅವರಿಗೆ ಅವರ ತಾಯಿ ಹೇಳಿ ಕೊಟ್ಟಿರಲಿಲ್ಲ ಎಂದೆನಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಲು ನೆಹರು ಕಾಶ್ಮೀರದ ವಿಷಯದ ಬಗ್ಗೆ ತಪ್ಪು ಮಾಡಿದರು. ಈಗ ಆಗಸ್ಟ್ 5 ರಂದು 370ನೇ ವಿಧಿ ಅಡಿ ಸ್ಥಾನಮಾನ ರದ್ದಾಗಿದೆ. ಮುಂದೊಂದು ದಿನ ಸಾಮಾನ್ಯ ಗಡಿ ನಿಯಂತ್ರಣ ರೇಖೆ (ಎಲ್‌ಓಸಿ) ಮೀರಿದ ಕಾಶ್ಮೀರ ಭಾಗವೂ ಭಾರತಕ್ಕೆ ಸೇರಿಕೊಳ್ಳುತ್ತದೆ. ಅದು ಗೊತ್ತಿದ್ದರಿಂದಲೇ ಕಾಂಗ್ರೆಸ್ ಹೊರತು ಪಡಿಸಿ ಉಳಿದೆಲ್ಲಾ ರಾಜಕೀಯ ಪಕ್ಷಗಳು ಬಿಜೆಪಿ ತೀರ್ಮಾನವನ್ನು ಬೆಂಬಲಿಸಿದವು ಎಂದು ಅವರು ವಿಶ್ಲೇಷಿಸಿದರು.

35ಎ ನೇ ವಿಧಿಯಡಿ ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರಾಶ್ರಿತರಾಗಿ ದೇಶಕ್ಕೆ ವಾಪಸ್ಸಾದ ಮೂಲ‌ ಕಾಶ್ಮೀರಿಗರಿಗೆ ಪೌರತ್ವವನ್ನೇ ಕೊಡಲಿಲ್ಲ. 370ನೇ ವಿಧಿಯಡಿ ವಿಶೇಷ ಸ್ಥಾನಮಾನದಿಂದ ಮೂರು ಕುಟುಂಬಗಳಿಗೆ ಮಾತ್ರ ಅನುಕೂಲವಾಗುತ್ತಿತ್ತು. ಅದು ಅಬ್ದುಲ್ಲಾ ಪರಿವಾರ, ಸೈಯೀದ್ ಪರಿವಾರ ಮತ್ತು ನೆಹರು-ಗಾಂಧಿ ಪರಿವಾರಕ್ಕೆ ಮಾತ್ರ ಅನುಕೂಲವಾಗಿತ್ತು.ಇದನ್ನೇ ಗೃಹ ಸಚಿವ ಅಮಿತ್ ಶಾ ಅವರು ಪರೋಕ್ಷವಾಗಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಕಾಶ್ಮೀರದಲ್ಲಿ 370 ವಿಧಿ ಜಾರಿಯಿಂದಾಗಿ ಅಲ್ಲಿನ ಮುಸ್ಲೀಮರಿಗೂ ಅನುಕೂಲವಾಗಿಲ್ಲ‌. ಕೇವಲ ಶೇ. 17 ರಷ್ಟು ಜನರಿಗೆ ಮಾತ್ರ ಉನ್ನತ ಶಿಕ್ಷಣ ಲಾಭ ದೊರಕಿದೆ. ಇವರನ್ನೆಲ್ಲಾ ದಾರಿ ತಪ್ಪಿಸಿದ್ದು ಗಾಂಧಿ ಕುಟುಂಬದವರು. ಇಷ್ಟು ದಿನ ತಾವು ಏನೆಲ್ಲಾ ಕಳೆದುಕೊಂಡಿದ್ದೆವು ಎಂಬುದು ಕಾಶ್ಮೀರಿ ಜನತೆಗೆ ಈಗ ಅರ್ಥವಾಗುತ್ತಿದೆ ಎಂದು ಅವರು ತಿಳಿಸಿದರು.

ಭಾರತೀಯ ಜನತಾ ಪಕ್ಷ ಹುಟ್ಟಿದ್ದೇ 370 ವಿಧಿಯಡಿ ವಿಶೇಷ ಸ್ಥಾನಮಾನ ರದ್ದು ಮಾಡುವುದಕ್ಕೆ. ಬಿಜೆಪಿ ಸ್ಥಾಪನೆ ಮಾಡಿದ್ದು ಕರ್ನಾಟಕದಲ್ಲಿ ಆಡಳಿತ ಮಾಡಲು ಅಲ್ಲ. ಈ ವಿಶೇಷ ಸ್ಥಾನಮಾನದ ಕಾರಣಕ್ಕೆ ನಮ್ಮ ಪಕ್ಷ ತನ್ನ ಮೊದಲ ಸಂಸ್ಥಾಪಕ ಅಧ್ಯಕ್ಷರನ್ನು ಕಳೆದುಕೊಂಡಿತು. ಡಾ.ಬಿ.ಆರ್.ಅಂಬೇಡ್ಕರ್ ರಚನೆ ಮಾಡಿದ್ದ ಸಂವಿಧಾನ ಕಾಶ್ಮಿರದಲ್ಲಿ ಜಾರಿಗೆ ಬಂದಿರಲಿಲ್ಲ‌. ಅದರ ವಿರುದ್ದ ಹೋರಾಟ ಮಾಡಬೇಕು ಎಂದು ಯಾವ ಹೋರಾಟಗಾರರಿಗೂ ಮನಸ್ಸಿಗೆ ಬರಲೇ ಇಲ್ಲ. ಇದಕ್ಕೆ ಕಾರಣ ಜಾತ್ಯತೀಯತೆಯ ರಾಜಕಾರಣವಾಗಿತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಿಗೆ ತಿರುಗೇಟು ನೀಡಿದರು.

Comments