ಎ ಮಂಜುಗೆ ಬಿಗ್ ಡಬಲ್ ಅಫರ್ ಕೊಟ್ಟ ಬಿಜೆಪಿ !!


ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಅಧ್ಯಕ್ಷ ಸ್ಥಾನ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕೈತಪ್ಪುವಂತೆ ಮಾಡಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಮಾಡಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಪಕ್ಕಾ ವಿರೋಧಿ ಮಾಜಿ ಸಚಿವ ಎ.ಮಂಜು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಅಗತ್ಯ ನಿರ್ದೇಶಕರ ಬೆಂಬಲ ಪಡೆಯವ ಮೂಲಕ ಕೆಎಂಎಫ್‌ ಅಧ್ಯಕ್ಷರಾಗಲು ರೇವಣ್ಣ ಸಕಲ ಸಿದ್ಧತೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಕೆಎಂಎಫ್‌ ಚುನಾವಣೆಯನ್ನೇ ಅನಿರ್ದಿಷ್ಟಾವಧಿಗೆ ಬಿಜೆಪಿ ಸರ್ಕಾರ ಮುಂದೂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಮೇಶ್‌ ಎಂಬ ಕಾಂಗ್ರೆಸ್‌ ಬೆಂಬಲಿಗರನ್ನು ನಾಮನಿರ್ದೇಶನ ಮಾಡುವ ಮೂಲಕ ಬಮೂಲ್‌ ಅಧ್ಯಕ್ಷರನ್ನಾಗಿ ಚುನಾಯಿತರಾಗುವಂತೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಮಾಜಿ ಸಚಿವ ಎ.ಮಂಜು ಅವರನ್ನು ಕೆಎಂಎಫ್‌ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವುದು. ಆನಂತರ ಕೆಎಂಎಫ್‌ ಚುನಾವಣೆಯಲ್ಲಿ ಎ.ಮಂಜು ಅವರನ್ನು ಗೆಲ್ಲಿಸಿಕೊಂಡು ಬರಲು ಸರ್ಕಾರ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಬಳಸಲು ಚಿಂತನೆ ನಡೆಸಿದೆ ಎನ್ನುತ್ತವೆ ಮೂಲಗಳು.

ಮುಂದೂಡಿಕೆ ಸಹಕರಿಸಿದ ಅಂಶಗಳು :  ಕೆಎಂಎಫ್‌ ಚುನಾವಣೆಯನ್ನು ಹೇಗಾದರೂ ಮುಂದೂಡಬೇಕೆಂಬ ಬಿಜೆಪಿ ನಾಯಕರಿಗೆ ತಕ್ಕುದಾದ ಕಾರಣಗಳೇ ಸಿಕ್ಕಿದ್ದು, ಅಧ್ಯಕ್ಷಗಿರಿ ಎಚ್‌.ಡಿ.ರೇವಣ್ಣ ಕೈಗೆ ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಒಕ್ಕೂಟದಿಂದ ಕಳೆದ 10 ದಿನಗಳ ಹಿಂದಷ್ಟೇ ನಿರ್ದೇಶಕರ ಆಯ್ಕೆ ನಡೆದಿತ್ತು. ಆದರೆ ಕೆಎಂಫ್‌ ಅಧ್ಯಕ್ಷ ಸ್ಥಾನಕ್ಕೆ ಮತ ಹಾಕುವ ಹಕ್ಕು ಈ ನಿರ್ದೇಶಕರಿಗೆ ಇರಲಿಲ್ಲ. ನಿರ್ದೇಶಕರಾಗಿ ಆಯ್ಕೆ ಆಗುವವರು ಸೊಸೈಟಿಗೆ ಹಾಲು ಹಾಕಬೇಕು ಎಂಬ ನಿಯಮವಿದೆ. ಆದರೆ ಬೆಂಗಳೂರು ಒಕ್ಕೂಟದಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಆನಂದ ಕುಮಾರ್‌ ಎಂಬುವರು ಒಕ್ಕೂಟಕ್ಕೆ ಹಾಲು ಹಾಕುವುದಿಲ್ಲ. ಅವರು ಗ್ರಾಮ ಮಟ್ಟದಲ್ಲಿ ನಾಮ ನಿರ್ದೇಶನಗೊಂಡು ಬೆಂಗಳೂರು ಒಕ್ಕೂಟದ ನಿರ್ದೇಶಕರಾಗಿದ್ದನ್ನು ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಅನರ್ಹಗೊಳಿಸಲಾಗಿತ್ತು.

ಈ ಎರಡು ಕಾರಣಗಳ ಜತೆಗೆ ಕೆಎಂಎಫ್‌ ಹಾಲಿ ಅಧ್ಯಕ್ಷ ಪಿ.ನಾಗರಾಜ್‌ ಅವರ ಅಧಿಕಾರಾವಧಿ ಸೆ.15ರವರೆಗೂ ಇದೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಇತ್ಯರ್ಥವಾಗಿಲ್ಲ. ಈ ನಡುವೆಯೇ ಚುನಾವಣೆ ನಡೆಸಲು ಮುಂದಾಗಿರುವ ಕಾರಣವನ್ನು ಇಟ್ಟುಕೊಂಡು ಚುನಾವಣೆ ಮುಂದೂಡುವಲ್ಲಿ ಬಿಜೆಪಿ ಸರ್ಕಾರ ಯಾಶಸ್ವಿಯಾಗಿದೆ.

ಮೂರನೆಯವರಿಗೆ ಲಾಭ :  ಜೆಡಿಎಸ್‌ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಕಾಂಗ್ರೆಸ್‌ ಶಾಸಕ ಭೀಮಾನಾಯಕ್‌ ಅವರು ಕೆಎಂಎಫ್‌ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳು. ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವಾಗಲೇ ಭೀಮಾನಾಯಕ್‌ ಕೆಎಂಎಫ್‌ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟು ಸಾಕಷ್ಟುಪ್ರಯತ್ನ ಪಟ್ಟಿದ್ದರು. ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಲ್ಲೂ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟು ಬೆಂಬಲ ಕೋರಿದ್ದರು. ಈ ನಡುವೆ ಸರ್ಕಾರ ಬಿದ್ದು ಹೋಗಿದ್ದು ಭೀಮಾನಾಯಕ್‌ ಕನಸು ನನಸಾಗಲೇ ಇಲ್ಲ. ಭೀಮಾ ನಾಯಕ್‌ ಕನಸು ನನಸಾಗಲು ರೇವಣ್ಣ ಅಡ್ಡಿಯಾಗಿದ್ದಾರೆ ಎನ್ನುವಾಗಲೇ ಬಿಜೆಪಿ ಎ.ಮಂಜು ಅವರನ್ನು ಕಣಕ್ಕೆ ಇಳಿಸಿದೆ. ಇಬ್ಬರ ಗಲಾಟೆಯಲ್ಲಿ ಮೂರನೆಯವರು ಲಾಭ ಪಡೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

Comments