ಲೋಕಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ, ಇದ್ದ ಮೈತ್ರಿ ಸರ್ಕಾರವೂ ಪತನ, ಸಾಲು-ಸಾಲು ಘಟಾನುಗಟಿ ಶಾಸಕರ ಸರಣಿ ರಾಜೀನಾಮೆ ಹೀಗೆ ಸಾಲು-ಸಾಲು ಹಿನ್ನಡೆ ಕಂಡ ರಾಜ್ಯ ಕಾಂಗ್ರೆಸ್ ಗೆ ಸೂಕ್ತ ಚಿಕಿತ್ಸೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸಿದೆ. ರಾಜ್ಯ ಕಾಂಗ್ರೆಸ್ ಗೆ ದೊಡ್ಡ ಬದಲಾವಣೆಯನ್ನು ತರಲು ಎಐಸಿಸಿ ನಿರ್ಧರಿಸಿದ್ದು, ಕೆಪಿಸಿಸಿ ಸಾರಥಿಯನ್ನೇ ಬದಲು ಮಾಡಿ, ಮತ್ತೊಬ್ಬರ ಹೆಗಲಿಗೆ ಸಂಘಟನೆಯ ಜವಾಬ್ದಾರಿಯನ್ನು ನೀಡಲು ನಿರ್ಧರಿಸಲಾಗಿದೆ.
ಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಪಕ್ಕಕ್ಕೆ ಸರಿಸಿ ಅವರ ಸ್ಥಾನಕ್ಕೆ ಗಟ್ಟಿ ನಾಯಕತ್ವ ಹೊಂದಿರುವ ಡಿಕೆ.ಶಿವಕುಮಾರ್ ಅವರನ್ನು ತಂದು ಕೂರಿಸುವ ನಿಶ್ಚಯವನ್ನು ಹೈಕಮಾಂಡ್ ಮಾಡಿದ್ದು, ಇಂದು ಅಥವಾ ನಾಳೆ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆ ಸ್ಥಾನವನ್ನು ಗಟ್ಟಿ ನಾಯಕತ್ವಕ್ಕೆ ಹೆಸರಾಗಿರುವ ಶಕ್ತಿವಂತ ರಾಜಕಾರಣಿ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗುತ್ತಿದೆ.ಈ ಮುಂಚೆಯೇ ಚರ್ಚೆ ನಡೆದಿತ್ತು ಪಕ್ಷ ಸಂಕಷ್ಟದಲ್ಲಿದ್ದಾಗೆಲ್ಲಾ ಡಿ.ಕೆ.ಶಿವಕುಮಾರ್ ನೆರವು ಮೈತ್ರಿ ಸರ್ಕಾರ ಉರುಳಿದಾಗಲೇ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ನಡೆದಿತ್ತು, ಆದರೆ ಈಗ ಅದು ಕಾರ್ಯರೂಪಕ್ಕೆ ಬರುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಸರ್ಕಾರ ಅಪಾಯದಲ್ಲಿದ್ದಾಗೆಲ್ಲ ನೆರವಿಗೆ ಬಂದಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಹೈಕಮಾಂಡ್ ಸಹ ಅನೇಕ ಬಾರಿ ಅವರ ನೆರವನ್ನು ಪಡೆದುಕೊಂಡಿದೆ ಹಾಗಾಗಿ ಅವರ ನಾಯಕತ್ವದಲ್ಲಿ ಹೈಕಮಾಂಡ್‌ಗೆ ವಿಶ್ವಾಸವಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಕೆಲವು ಅಡೆ-ತಡೆಗಳೂ ಸಹ ಇವೆ. ಡಿ.ಕೆ.ಶಿವಕುಮಾರ್ ಅವರು ದಕ್ಷಿಣ ಕರ್ನಾಟಕ ಭಾಗಗಳಿಗೆ ಮಾತ್ರವೇ ದೊಡ್ಡ ನಾಯಕರು. ಉತ್ತರ ಕರ್ನಾಟಕದಲ್ಲಿ ಅವರ ಪ್ರಭಾವ ಕಡಿಮೆ. ಇದಕ್ಕೆ ಉದಾಹರಣೆಯೆಂಬಂತೆ, ಎಂಬಿ ಪಾಟೀಳ್, ಜಾರಕಿಹೊಳಿ ಸಹೋದರರು ಡಿ.ಕೆ.ಶಿವಕುಮಾರ್ ಅವರ ಮೇಲೆ ಮಾತಿನ ಯುದ್ಧ ನಡೆಸಿದ್ದು ಮುಂದೆಯೇ ಇದೆ. ಉತ್ತರ ಕರ್ನಾಟಕದ ನಾಯಕರನ್ನು ಡಿ.ಕೆ.ಶಿವಕುಮಾರ್ ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲದ ಸಂಗತಿ.
ಕಾಂಗ್ರೆಸ್‌ನ ಹಿರಿಯರು ಮತ್ತು ಕಿರಿಯರು ಇಬ್ಬರಿಂದಲೂ ಸಮಾನ ಗೌರವ ಪಡೆದುಕೊಳ್ಳುವ ರಾಜಕಾರಣಿ ಡಿ.ಕೆ.ಶಿವಕುಮಾರ್. ಅಷ್ಟು ಮಾತ್ರವೇ ಅಲ್ಲದೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿಯೂ ಸಹ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತಮ ಗೆಳೆಯರಿದ್ದಾರೆ ಹಾಗಾಗಿ ಪಕ್ಷ ಸಂಘಟನೆ ಮತ್ತು ರಾಜಕೀಯ ಆಟ ಅವರಿಗೆ ಕಷ್ಟವಾದುದಲ್ಲ ಎಂದು ಹೈಕಮಾಂಡ್ ಚಿಂತಿಸಿದೆ.
ರಾಜಕೀಯ ಒಳ ಆಟದ ಅನುಭವ ಉಳ್ಳ ಡಿ.ಕೆ.ಶಿವಕುಮಾರ್ ಅವರಿಗೆ, ರಾಜ್ಯದಾದ್ಯಂತ ದೊಡ್ಡ ಮಟ್ಟದ ಅಭಿಮಾನಿಗಳ ಬಲ ಇದೆ. ಜೊತೆಗೆ ರಾಜ್ಯದ ಅತಿ ದೊಡ್ಡ ಸಮುದಾಯದ ಬಲವೂ ಇದೆ. ಇವನ್ನೆಲ್ಲಾ ಉಪಯೋಗಿಸಿಕೊಂಡು ಈಗಾಗಲೇ ಮುಳುಗು ಹಾದಿಯಲ್ಲಿರುವ ರಾಜ್ಯ ಕಾಂಗ್ರೆಸ್ ಅನ್ನು ಹೇಗೆ ಮೇಲಕ್ಕೆ ಎತ್ತುತ್ತಾರೆ ಡಿ.ಕೆ.ಶಿವಕುಮಾರ್ ಎಂಬುದನ್ನು ಕಾದು ನೋಡಬೇಕಿದೆ.
Comments
Post a Comment