ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಈಗಾಗಲೇ ಅನೇಕರು ರೇಸ್ ನಲ್ಲಿದ್ದಾರೆ. ಈ ನಡುವೆ ಬೆಳಗಾವಿ ಜಿಲ್ಲೆಗೆ ನಾಲ್ಕು ಮಂದಿಯನ್ನಾದರೂ ಸಚಿವರನ್ನಾಗಿ ಮಾಡಬೇಕು ಎಂದು ರಾಜ್ಯ ಖಾತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬೇಡಿಕೆ ಇಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, 18 ಜನ ಶಾಸಕರು ಇಲ್ಲಿದ್ದಾರೆ. ಹಾಗಾಗಿ ಜಿಲ್ಲೆಗೆ ನಾಲ್ಕು ಮಂದಿಯನ್ನಾದರೂ ಸಚಿವರನ್ನಾಗಿ ಮಾಡಬೇಕು ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ರೈತರು, ಬಡವರು, ಸಾಮಾನ್ಯ ಜನರ ಪರ ಆಡಳಿತ ನೀಡುತ್ತಾರೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್, ಜೆಡಿಎಸ್ ನ್ನು ತಿರಸ್ಕಾರ ಮಾಡಿದ್ದರು. ಬಿಜೆಪಿ ಪರವಾಗಿಯೇ ಮತ ಹಾಕಿದ್ದರು. ಆದರೆ, ನಮಗೆ ಮೂರ್ನಾಲ್ಕು ಸೀಟುಗಳು ಕಡಿಮೆ ಬಂದಿದ್ದರಿಂದ ಆ ಎರಡೂ ಪಕ್ಷಗಳು ಸೇರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಎಂಬ ಕಾರಣಕ್ಕೆ ಮೈತ್ರಿ ಮಾಡಿಕೊಂಡರು. ಈ ದೋಸ್ತಿ ಸರ್ಕಾರದ 14 ತಿಂಗಳ ಆಡಳಿತಕ್ಕೆ ಜನರು ಬೇಸತ್ತು ಹೋಗಿದ್ದರು. ಈಗ ಭಗವಂತನ ಕೃಪೆಯಿಂದ ಮತ್ತೊಮ್ಮೆ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿದೆ ಎಂದರು.
ಇನ್ನು ಬಿಜೆಪಿಗೆ ಜೆಡಿಎಸ್ ಪಕ್ಷ ಬಾಹ್ಯ ಬೆಂಬಲ ನೀಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಒಳ್ಳೆಯ ಆಡಳಿತ ಕೊಡುವ ಸಂದರ್ಭದಲ್ಲಿ ಯಾರೇ ಆದರೂ ಬಾಹ್ಯ ಬೆಂಬಲ ಕೊಟ್ಟರೆ ಒಳ್ಳೆಯದೇ, ಅದನ್ನು ಸ್ವೀಕರಿಸಬೇಕಾ, ಬೇಡವಾ ಎಂಬುದನ್ನು ಯಡಿಯೂರಪ್ಪ ಸೇರಿ ರಾಜ್ಯ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದರು.
Comments
Post a Comment