ಶುಕ್ರವಾರದಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಮೊದಲ ಶಾಕ್ ನೀಡಿದೆ. ವಿಧಾನಸಭಾ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯನವರ ಆಯ್ಕೆಗೆ ಒಲವು ತೋರಿದ್ದ ಯಡಿಯೂರಪ್ಪನವರಿಗೆ 'ನೋ' ಎಂದು ಹೇಳಿದೆ.
ಕೆ.ಜಿ. ಬೋಪಯ್ಯ ಅವರನ್ನು ಸ್ಪೀಕರ್ ಮಾಡಿದರೆ ಸರ್ಕಾರಕ್ಕೆ ಸಂಕಷ್ಟ ಎದುರಾದ ಸಂದರ್ಭಗಳಲ್ಲಿ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವನ್ನು ಯಡಿಯೂರಪ್ಪ ಹೊಂದಿದ್ದು, ಹೀಗಾಗಿಯೇ ಪಕ್ಷದ ರಾಜ್ಯ ನಾಯಕರ ಮುಂದೆ ಬೋಪಯ್ಯನವರನ್ನೇ ಸ್ಪೀಕರ್ ಮಾಡೋಣ ಎಂದು ಹೇಳಿದ್ದರಂತೆ.
ಆದರೆ ಈ ವಿಚಾರ ಬಿಜೆಪಿ ಹೈಕಮಾಂಡ್ ಗಮನಕ್ಕೆ ಬರುತ್ತಿದ್ದಂತೆ ಇದಕ್ಕೆ ತಡೆ ಒಡ್ಡಿದ ನಾಯಕರು ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗುವಂತೆ ನೋಡಿಕೊಂಡಿದ್ದಾರೆ. ಈ ಹಿಂದೆ ಸ್ಪೀಕರ್ ಆಗಿದ್ದ ಕೆ.ಜಿ. ಬೋಪಯ್ಯ ತೆಗೆದುಕೊಂಡ ಕೆಲವು ನಿರ್ಧಾರಗಳು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಹೀಗಾಗಿ ಕೆ.ಜಿ. ಬೋಪಯ್ಯ ಸ್ಪೀಕರ್ ಆದರೆ ಪಕ್ಷ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಬೋಪಯ್ಯನವರ ಆಯ್ಕೆಗೆ ಹೈಕಮಾಂಡ್ ಒಪ್ಪಿಗೆ ನೀಡಲಿಲ್ಲವೆಂದು ಹೇಳಲಾಗಿದೆ.
Comments
Post a Comment