ಇದೀಗ ಬಂದ ಬ್ರೇಕಿಂಗ್: ಬಿಜೆಪಿಗೆ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ಮುಂದಾದ ಜೆಡಿಎಸ್.?

ಮಂಗಳವಾರದಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಪತನಗೊಂಡಿದ್ದು, ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರು. ಶುಕ್ರವಾರದಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಯಡಿಯೂರಪ್ಪ ಸೋಮವಾರದಂದು ಬಹುಮತ ಸಾಬೀತುಪಡಿಸಲಿದ್ದು, ಇದರ ಮಧ್ಯೆ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಶುಕ್ರವಾರ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ, ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಶಾಸಕರುಗಳು, ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಯವರಿಗೆ ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಕುರಿತು ಒತ್ತಡ ಹೇರಿದರೆಂದು ಹೇಳಲಾಗಿದೆ. ಸರ್ಕಾರದ ಸುಭದ್ರತೆಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ಮತ್ತೆ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದ್ದು, ಹೀಗಾಗಿ ಈ ಸರ್ಕಾರಕ್ಕೆ ಬೆಂಬಲ ನೀಡುವುದು ಸೂಕ್ತ ಎಂಬ ಅಭಿಪ್ರಾಯ ತಿಳಿಸಿದರೆನ್ನಲಾಗಿದೆ.

ಮತ್ತೆ ಕೆಲ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಬೆಂಬಲಕ್ಕೆ ಜೆಡಿಎಸ್ ಮುಂದಾದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯಪಟ್ಟರೆನ್ನಲಾಗಿದೆ. ಅಂತಿಮವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕುಮಾರಸ್ವಾಮಿಯವರಿಗೆ ನೀಡಲಾಗಿದ್ದು, ಪಕ್ಷದ ವರಿಷ್ಠ ದೇವೇಗೌಡರೊಂದಿಗೆ ಚರ್ಚಿಸಿದ ಬಳಿಕ ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Comments