ದೆಹಲಿ ಸಮೀಪದ ಫರೀದಾಬಾದ್ ನಲ್ಲಿ ಗುರುವಾರ ಬೆಳಗ್ಗೆ ಹರಿಯಾಣದ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿಯನ್ನು (38 ವರ್ಷ ವಯಸ್ಸು) ಅಪರಿಚಿತರು ಗುಂಡಿಟ್ಟು ಕೊಂದಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಪ್ರಕಾರ, ಜಿಮ್ ನಿಂದ ಹೊರಬಂದ ಚೌಧರಿ ಅವರ ಮೇಲೆ ದಾಳಿ ನಡೆದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಾರುತಿ ಸುಜುಕಿ SX4 ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಾಂಗ್ರೆಸ್ ನಾಯಕ ಚೌಧರಿ ಅವರ ಮೇಲೆ ಹತ್ತು ಗುಂಡುಗಳನ್ನು ಹಾರಿಸಿದ್ದಾರೆ. ಸೆಕ್ಟರ್ 9 ಫರೀದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಜಂಗಲ್ ರಾಜ್. ಕಾನೂನಿನ ಬಗ್ಗೆ ಯಾರಿಗೂ ಭಯ ಇಲ್ಲ. ಲೈಂಗಿಕ ಹಿಂಸೆ ನೀಡುತ್ತಿದ್ದವರ ವಿರೋಧಿಸಿದ ಕಾರಣಕ್ಕೆ ಗುರುವಾರ ಮಹಿಳೆಗೆ ಇರಿಯಲಾಗಿದೆ. ಸಮಗ್ರವಾದ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವರ್ ಆಗ್ರಹ ಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯರೊಬ್ಬರ ಮೇಲೆ ನಡೆದಿರುವ ಇಂಥ ಕ್ರೂರ ದಾಳಿಯ ಬಗ್ಗೆ ನಮಗೆ ಅಪಾರ ಸಿಟ್ಟು ಹಾಗೂ ದುಃಖ ಇದೆ. ತಪ್ಪಿತಸ್ಥರನ್ನು ಶೀಘ್ರವಾಗಿ ಕಂಡುಹಿಡಿದು, ಅವರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಹರಿಯಾಣ ಸರಕಾರವನ್ನು ಆಗ್ರಹಿಸುತ್ತೇವೆ. ಇಂಥ ದುಃಖದ ಸನ್ನಿವೇಶದಲ್ಲಿ ಚೌಧರಿ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಹರಿಯಾಣ ಕಾಂಗ್ರೆಸ್ ನ ವಕ್ತಾರರಾಗಿದ್ದವರು ವಿಕಾಸ್ ಚೌಧರಿ. ಇತ್ತೀಚೆಗಷ್ಟೇ ಅವರು ಇಂಡಿಯನ್ ನ್ಯಾಷನಲ್ ಲೋಕ್ ದಳ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದರು.
Comments
Post a Comment