ಬಿಗ್ ನ್ಯೂಸ್: ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಎನ್.ಡಿ.ಎ ಯ ಪ್ರಭಾವಿ ನಾಯಕ...??

ಬಿಹಾರದ ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಭಾರಿ ಅಂತರದಲ್ಲಿ ಗೆದ್ದು ಗಿನ್ನೀಸ್ ದಾಖಲೆ ಬರೆದಿದ್ದ ಪ್ರಮುಖ ರಾಜಕಾರಣಿ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಈ ಬಾರಿ ಲೋಕಸಭೆಗೆ ಸ್ಪರ್ಧಿಸಿರಲಿಲ್ಲ. ಆದರೆ, ಕೇಂದ್ರ ಸಚಿವ ಸ್ಥಾನ ದಕ್ಕಿಸಿಕೊಂಡಿದ್ದರು. ಶುಕ್ರವಾರದಂದು ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಹಾರ ವಿಧಾನಸಭೆಯ ಕಾರ್ಯದರ್ಶಿ, ಚುನಾವಣಾಧಿಕಾರಿ ಬಟೇಶ್ವರ್ ನಾಥ್ ಪಾಂಡೆ ಅವರು ಪಾಸ್ವಾನ್ ಅವರಿಗೆ ರಾಜ್ಯಸಭೆಗೆ ಆಯ್ಕೆಯಾಗಿ ಸಂಸದರಾದ ಪ್ರಮಾಣ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಉಪಸ್ಥಿತರಿದ್ದರು.

72 ವರ್ಷ ವಯಸ್ಸಿನ ಪಾಸ್ವಾನ್ ಅವರು 1977ರಲ್ಲಿ ಹಾಜಿಪುರದಲ್ಲಿ 4.24 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ, ಹಿಂತಿರುಗಿ ನೋಡಿಲ್ಲ, ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ಅವರದ್ದೇ ಪ್ರಾಬಲ್ಯವಾಗಿತ್ತು. ಆದರೆ, ಈ ಬಾರಿ ಪಾಸ್ವಾನ್ ಬದಲಿಗೆ ಅವರ ಕುಟುಂಬದ ಮೂವರು ಸ್ಪರ್ಧಿಸಿ ಜಯಭೇರಿ ಬಾರಿಸಿದ್ದಾರೆ.

ಚಿರಾಗ್ ಪಾಸ್ವಾನ್ (ರಾಮ್ ವಿಲಾಸ್ ಪಾಸ್ವಾನ್ ಪುತ್ರ), ಜಮುಯಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದರು. ಪಶುಪತಿ ಕುಮಾರ್ ಪಾಸ್ವಾನ್(ರಾಮ್ ವಿಲಾಸ್ ಕಿರಿಯ ಸೋದರ) ಹಾಜಿಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಜಯ ದಾಖಲಿಸಿದರು. ರಾಮ ಚಂದ್ರ ಪಾಸ್ವಾನ್ (ರಾಮ್ ವಿಲಾಸ್ ಕಿರಿಯ ಸೋದರ) ಸಮಸ್ಟಿಪುರ್ ನಿಂದ ಸ್ಪರ್ಧೆ ಮಾಡಿ ಉತ್ತಮ ಅಂತರದಲ್ಲಿ ಗೆಲುವು ದಾಖಲಿಸಿ ಸಂಸತ್ ಪ್ರವೇಶಿಸಿದ್ದಾರೆ. 1960ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷ ಶಾಸಕರಾಗಿ ರಾಜಕೀಯ ಜೀವನ ಆರಂಭಿಸಿದ ಪಾಸ್ವಾನ್ ಅವರು 2010ರಲ್ಲಿ ಮೇಲ್ಮನೆ ಚುನಾವಣೆ ಎದುರಿಸಿದ್ದರು. 2014ರಲ್ಲಿ ಅವಧಿಗೂ ಮುನ್ನ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Comments