ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಹರಿಯಾಣ ವಿಧಾನಸಭೆಗಳಿಗೆ ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆ ಪೂರ್ಣಗೊಳ್ಳುವವರೆಗೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಯತ್ನಕ್ಕೆ ಕೈಹಾಕದಂತೆ ಪಕ್ಷದ ಹೈಕಮಾಂಡ್ ರಾಜ್ಯ ಬಿಜೆಪಿ ಮುಖಂಡರಿಗೆ ಸೂಚಿಸಿದೆ. ಈ ಮೂರು ರಾಜ್ಯಗಳ ವಿಧಾನಸಭೆಗೆ ಮುಂದಿನ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಒಂದೊಮ್ಮೆ ಕರ್ನಾಟಕದ ಸಮ್ಮಿಶ್ರ ಸರ್ಕಾರ ಪತನಕ್ಕೆ ಕೈಹಾಕಿದಲ್ಲಿ, ಈ ಚುನಾವಣೆಗಳ ಫಲಿತಾಂಶದ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಕಾರಣದಿಂದ ಈ ನಿರ್ದೇಶನ ನೀಡಲಾಗಿದೆ.
'ಸದ್ಯ ಆಪರೇಷನ್ ಕಮಲಕ್ಕೆ ಮುಂದಾಗದೆ, ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ವೈಫಲ್ಯಗಳ ಬಗ್ಗೆ ದನಿ ಎತ್ತಬೇಕು' ಎಂದು ಕೇಂದ್ರದ ಗೃಹ ಸಚಿವರೂ ಆಗಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಚುನಾವಣೆ ಎದುರಿಸಲಿರುವ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದ್ದು, ಕರ್ನಾಟಕ ಮತ್ತಿತರ ಕಡೆ ಬಿಜೆಪಿಯೇತರ ಸರ್ಕಾರಗಳ ಪತನಕ್ಕೆ ಯತ್ನಿಸಿದರೆ ಮತದಾರರಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ. ಹಾಗಾಗಿ ಚುನಾವಣೆ ಪೂರ್ಣಗೊಳ್ಳುವವರೆಗೆ ವಿಪಕ್ಷಗಳ ಆರೋಪಗಳಿಗೆ ಆಸ್ಪದ ನೀಡದೆ ಸುಮ್ಮನೆ ಇರುವುದು ಸೂಕ್ತ ಎಂಬ ಸಂದೇಶ ರವಾನೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಪಕ್ಷೇತರರಾಗಿ ಆಯ್ಕೆಯಾಗಿರುವ ಇಬ್ಬರು ಶಾಸಕರಿಗೆ ಇತ್ತೀಚೆಗಷ್ಟೇ ಸಂಪುಟದಲ್ಲಿ ಸ್ಥಾನ ನೀಡಿದ್ದರಿಂದ ಅಸಮಾಧಾನ ಗೊಂಡಿರುವ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಸರ್ಕಾರ ರಚಿಸುವ ಯತ್ನ ಬೇಡ ಎಂದು ಅಮಿತ್ ಶಾ ಸೂಚಿಸಿರುವುದರಿಂದ ರಾಜ್ಯದಲ್ಲಿ ದಿಢೀರ್ ರಾಜಕೀಯ ಬದಲಾವಣೆ ನಿರೀಕ್ಷಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲೂ ಅಲ್ಪ ಬಹುಮತದ ಕಾಂಗ್ರೆಸ್ ಆಡಳಿತವಿದ್ದು, ಲೋಕಸಭೆ ಚುನಾವಣೆಯ ನಂತರ ಕೆಲವು ಶಾಸಕರು ಬಿಜೆಪಿ ಸೇರ್ಪಡೆಗೆ ಆಸಕ್ತಿ ತಾಳಿದ್ದಾರೆ. ಅಲ್ಲಿ ಹಾಗೂ ಕರ್ನಾಟಕದಲ್ಲಿ ಸರ್ಕಾರ ಕೆಡವುವ ಯತ್ನಕ್ಕೆ ಕೈಹಾಕಿದರೆ ಸಂಸತ್‌ನ ಅಧಿವೇಶನಕ್ಕೆ ವಿರೋಧ ಪಕ್ಷಗಳಿಂದ ಅಡಚಣೆ ಎದುರಾಗುವ ಆತಂಕವಿದೆ. ಅಧಿವೇಶನ ಮತ್ತು ಮೂರು ರಾಜ್ಯಗಳ ಚುನಾವಣೆ ಪೂರ್ಣಗೊಂಡ ಬಳಿಕವಷ್ಟೇ ಸರ್ಕಾರ ರಚನೆಯ ಯತ್ನಕ್ಕೆ ಮುಂದಾಗಬಹುದು ಎಂದೂ ಹೈಕಮಾಂಡ್ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.
'ಬೇರೆ ಪಕ್ಷದ ಶಾಸಕರು ಬಂದರೆ ನಾನು ಜವಾಬ್ದಾರನಲ್ಲ'
ಬೆಂಗಳೂರು: 'ಕುಳಿತಲ್ಲಿ, ನಿಂತಲ್ಲಿ ಯಾವಾಗ ಸರ್ಕಾರ ರಚನೆ ಮಾಡುತ್ತೀರಿ ಎಂದು ಜನ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಪಕ್ಷಕ್ಕೆ ಬನ್ನಿ ಎಂದು ನಾನಾಗಿಯೇ ಯಾವ ಶಾಸಕರನ್ನೂ ಕರೆಯುವುದಿಲ್ಲ. ಅವರಾಗಿಯೇ ಬಂದರೆ ನಾನು ಜವಾಬ್ದಾರನಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಮುಖ್ಯಮಂತ್ರಿ ದುರಹಂಕಾರಿಯಂತೆ ವರ್ತಿಸುತ್ತಿದ್ದಾರೆ. 105 ಸ್ಥಾನ ಪಡೆದಿರುವ ಪ್ರತಿಪಕ್ಷದ ಸಲಹೆಗಳನ್ನು ಅವರು ಕೇಳುತ್ತಿಲ್ಲ' ಎಂದು ಅಸಮಾಧಾನ
ವ್ಯಕ್ತಪಡಿಸಿದರು.
'ರಾಜ್ಯದಲ್ಲಿ ಬರಗಾಲವಿದೆ. ಕುಡಿಯುವ ನೀರಿನ ಸಮಸ್ಯೆಯಿದೆ. ಈ ಹೊತ್ತಿನಲ್ಲಿ ರಾಜ್ಯದಾದ್ಯಂತ ಓಡಾಡಿ ಪರಿಸ್ಥಿತಿ ಅವಲೋಕಿಸಿ, ನಂತರ ಗ್ರಾಮ ವಾಸ್ತವ್ಯ ಮಾಡಿ ಎಂದು ಸಲಹೆ ನೀಡಿದರೆ, ನಮ್ಮ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಲ್ಲದೆ, ಬರಗಾಲದಲ್ಲಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 'ಸಮ್ಮಿಶ್ರ ಸರ್ಕಾರದ ನಾಯಕರು 13 ತಿಂಗಳಿನಲ್ಲಿಯೇ ಚುನಾವಣೆಯ ಮಾತನಾಡುತ್ತಿದ್ದಾರೆ. ಮಧ್ಯಂತರ ಚುನಾವಣೆ ಯಾರಿಗೆ ಬೇಕಾಗಿದೆ ? ಅಧಿಕಾರ ನಡೆಸಲು ಆಗದಿದ್ದರೆ ರಾಜೀನಾಮೆ ನೀಡಿ ಕೆಳಗಿಳಿಯಿರಿ' ಎಂದು ಅವರು ಹೇಳಿದರು.
Comments
Post a Comment