ಬಿಗ್ ನ್ಯೂಸ್: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ದಕ್ಷಿಣ ಭಾರತದ ಪ್ರಭಾವಿ ನಾಯಕನಿಗೆ ಪಟ್ಟ.?

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ತಮ್ಮ ನಿರ್ಧಾರವನ್ನು ರಾಹುಲ್ ಗಾಂಧಿ ಮರುಪರಿಶೀಲಿಸುತ್ತಾರೆ ಎಂದು ಕಳೆದ ವಾರದವರೆಗೂ ಕಾಂಗ್ರೆಸ್ ನಾಯಕರು ಭಾವಿಸಿಕೊಂಡಿದ್ದರು. ಆದರೆ ಅದು ಈಡೇರುವ ಲಕ್ಷಣ ಕಾಣುತ್ತಿಲ್ಲ. ಕಾಂಗ್ರೆಸ್ ನಲ್ಲಿ ಕೆಲವು ನಾಯಕರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷೆ ಸ್ಥಾನವನ್ನು ಮತ್ತೆ ವಹಿಸಿಕೊಳ್ಳುತ್ತಾರೆ ಎಂಬ ಆಶಾವಾದದಲ್ಲಿದ್ದರೆ ಬದಲಿ ವ್ಯವಸ್ಥೆಯನ್ನು ಕೂಡ ಹುಡುಕಲಾಗುತ್ತಿದೆ.

ಕಾಂಗ್ರೆಸ್ ನ ಹಿರಿಯ ನಾಯಕರಾದ ಅಶೋಕ್ ಗೆಹ್ಲೊಟ್, ಮಲ್ಲಿಕಾರ್ಜುನ ಖರ್ಗೆಯವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದ್ದು ಈ ಬಾರಿ ದಕ್ಷಿಣ ಭಾರತದ ನಾಯಕರಿಗೆ ಪಕ್ಷದ ಅಧ್ಯಕ್ಷ ಹುದ್ದೆ ನೀಡಲಾಗುವುದು ಎಂದು ಎಐಸಿಸಿ ಪದಾಧಿಕಾರಿಗಳು ಹೇಳುತ್ತಾರೆ.
ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಈ ಬಾರಿಯ ಸಂಸತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಿದ್ದು ಒಂದೆಡೆಯಾದರೆ, ಭಾರತೀಯ ಜನತಾ ಪಾರ್ಟಿ ತನ್ನ ಅಧಿಕಾರವನ್ನು ದಕ್ಷಿಣ ಭಾರತಕ್ಕೆ ವಿಸ್ತರಿಸಲು ನೋಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕೂಡ ಸ್ಥಳೀಯ ಮತ್ತು ವಿಸ್ತಾರ ಮಹಾತ್ವಾಕಾಂಕ್ಷೆಯನ್ನು ಬಯಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಹಿನ್ನಡೆ ಅನುಭವಿಸಿದ್ದು ಕೇರಳ ಮತ್ತು ತಮಿಳು ನಾಡಿನಲ್ಲಿ. ಈ ಎರಡು ರಾಜ್ಯಗಳಿಂದಲೇ ತಮ್ಮ ಪಕ್ಷದ ಪುನಶ್ಚೇತನವನ್ನು ಕಾಂಗ್ರೆಸ್ ಬಯಸುತ್ತಿದೆ. ತಮಿಳು ನಾಡು ಮತ್ತು ಕೇರಳದಲ್ಲಿ ಸಂಸದರ ಸಂಖ್ಯೆ ಹೆಚ್ಚಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನ ಪುನಶ್ಚೇತನ ಮಾಡುವ ನಾಯಕತ್ವವಿದೆ ಎಂದು ಹೈಕಮಾಂಡ್ ನಂಬಿದೆ.
ಆದರೆ ಮುಳುಗುತ್ತಿರುವ ಹಡಗಿನ ನಾವಿಕನಾಗಲು ಯಾರು ಇಚ್ಛಿಸುತ್ತಾರೆ ಎಂಬಂತೆ ಸೋಲಿನಿಂದ ಕಂಗೆಟ್ಟು ಹೋಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿಯನ್ನು ಏರಲು ಕೆಲವು ಹಿರಿಯ ನಾಯಕರು ಬಿಟ್ಟರೆ ಸದ್ಯ ಯಾರೂ ಮನಸ್ಸು ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರನ್ನು ಕೇಳಲಾಗಿತ್ತು, ಆದರೆ ಅವರು ಯಾರಾದರೂ ಕಿರಿ ವಯಸ್ಸಿನವರು ಅಧ್ಯಕ್ಷ ಹುದ್ದೆ ವಹಿಸಿಕೊಂಡರೆ ಉತ್ತಮ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅಧ್ಯಕ್ಷರಾಗಿ ಮುಂದುವರಿಯಲು ಬಯಸುತ್ತಿಲ್ಲವಾದರೆ ಬದಲಿ ನಾಯಕರನ್ನು ಹುಡುಕಬೇಕು ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಮುಕ್ತವಾಗಿಯೇ ಹೇಳಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ್, ಊಮನ್ ಚಾಂಡಿ ಅವರ ಹೆಸರುಗಳು ದಕ್ಷಿಣ ಭಾರತದಿಂದ ಕೇಳಿಬರುತ್ತಿದೆ.

Source: Kannada Prabha

Comments