ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇತ್ತೀಚೆಗೆ ಸಿಡಿಸಿದ ಮಧ್ಯಂತರ ಚುನಾವಣೆಯ ಬಾಂಬ್ ಮೂರು ಪಕ್ಷಗಳಲ್ಲಿ ತಲ್ಲಣ ಸೃಷ್ಠಿಸಿದ್ದು; ಬಾದಾಮಿಯಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ಚುನಾವಣೆಗೆ ಸಿದ್ಧರಾಗಿರಬೇಕೆಂದು ಮುಖಂಡರಿಗೆ ಕರೆ ನೀಡುವ ಮೂಲಕ ಪರೋಕ್ಷವಾಗಿ ಮಧ್ಯಂತರ ಚುನಾವಣೆಯ ಮುನ್ಸೂಚನೆ ನೀಡಿದ್ದಾರೆ.
ಬಾದಾಮಿಯಲ್ಲಿ ಲೋಕಸಭಾ ಚುನಾವಣೆಯ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸದ್ಯ ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ನಾನು ಮಧ್ಯಂತರ ಚುನಾವಣೆಗಾಗಿ ಸಭೆ ಕರೆದಿಲ್ಲ. ಆದರೆ ರಾಜಕೀಯ ಪಕ್ಷವಾಗಿ ಯಾವಾಗಲು ಚುನಾವಣೆಗೆ ತಯಾರಿರಬೇಕು. ಚುನಾವಣೆಗೆ ಸಿದ್ಧರಾಗಿರಿ ಎಂದು ಹೇಳಿದ್ದಾರೆ. ನನ್ನ ವರ್ಚಸ್ಸು ಕಡಿಮೆಯಾಗಿದೆ ಮಾಜಿ ಮಂತ್ರಿ ಶ್ರೀರಾಮುಲು ಹೇಳಿದ್ದಾರೆ. ಇದನ್ನು ಹೇಳಲು ಅವರ್ಯಾರು? ಜನ ನಿರ್ಧರಿಸುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದಿಂದಲೇ ಅಹಿಂದ ಸಂಘಟನೆ: ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೇನೆ. ಪ್ರತ್ಯೇಕವಾಗಿ ಅಹಿಂದ ಸಂಘಟನೆಯನ್ನು ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಅಹಿಂದ ವರ್ಗಕ್ಕೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದರು. ಬಯ್ಯಾಪುರ ಹೇಳಿಕೆ ಸಮರ್ಥನೆ: ಅಹಿಂದ ಸಂಘಟನೆ ಮಾಡಿದ್ದಕ್ಕೆ ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯನವರನ್ನು ಹೊರ ಹಾಕಲಾಯಿತು ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿರುವುದರಲ್ಲಿ ತಪ್ಪೇನಿಲ್ಲ. ಅವರು ಹೇಳಿರುವುದರಲ್ಲಿ ಸತ್ಯವಿದೆ. ಈಗ ಸಮ್ಮಿಶ್ರ ಸರ್ಕಾರ ಇದೆಯೆಂದು ಸತ್ಯ ತಿರುಚಲು ಸಾಧ್ಯವಿದೆಯೇ ಎಂದರು.
ಕೆಲಸ ಮಾಡುವವರಿಗೆ ಓಟ್ ಹಾಕಿ. ಕೆಲಸ ಮಾಡದವರಿಗೆ ಏಕೆ ಮತ ಹಾಕುತ್ತೀರಿ ಎಂದು ಕೇಳಿದ್ದೆ. ಇದರಲ್ಲಿ ತಪ್ಪೇನಿದೆ ಎಂದು ನಿನ್ನೆ ಹೇಳಿದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಿಜೆಪಿಯ ಯಾವ ಆಪರೇಷನ್ ಕಮಲ ನಡೆಯುವುದಿಲ್ಲ. ಆಪರೇಷನ್ ಮಾಡುವವರಿಗೇ ಆಪರೇಷನ್ ಆಗಬೇಕಷ್ಟೆ. ಪಶ್ಚಿಮಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಚುನಾವಣೆಗೆ ಅಮಿತ್ ಶಾ ಅವರು ಪ್ಲಾನ್ ಮಾಡಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅವರು ಏನು ಮಾಡಿದರೂ, ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಇದು ನಿಶ್ಚಿತ ಎಂದರು.
Source: ಈ ಸಂಜೆ
Comments
Post a Comment