ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ ಮಾತಿಗೆ ತಾತ ದೇವೆಗೌಡ ಹೇಳಿದ್ದೇನು ಗೊತ್ತಾ.? ಮೊಮ್ಮನಿಗೆ ತಾತ ನೀಡಿದ ಕಿವಿಮಾತು ಯಾವುದು ಗೊತ್ತಾ.?

ಲೋಕಸಭಾ ಅಧಿವೇಶನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತು ಕೇಳಿ ಜೆಡಿಎಸ್​ ಹಿರಿಯ ನಾಯಕ ಎಚ್​​ಡಿ ದೇವೇಗೌಡ ಸಖತ್​ ಖುಷಿಯಾಗಿದ್ದಾರೆ. ದೂರವಾಣಿ ಕರೆ ಮಾಡಿ ಮೊಮ್ಮಗನ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಜ್ವಲ್​​ಗೆ ಗೌಡರು ಕೆಲ ಟಿಪ್ಸ್​ ನೀಡಿದ್ದಾರೆ.

“ನೀನು ಯುವಕ. ಮೊದಲ ಅಧಿವೇಶನದಲ್ಲಿಯೇ ರೈತರಿಗೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಿರುವ ವಿಚಾರ ಪ್ರಸ್ತಾಪಿಸಿದ್ದು ಒಳ್ಳೆಯ ವಿಚಾರ. ನಿನ್ನ ಬೇಡಿಕೆ ಸಮಂಜಸವಾಗಿದೆ. ಹಾಸನ ಸೇರಿ ಇಡೀ ರಾಜ್ಯದಲ್ಲಿ ಕುಡಿಯುವ ನೀರಿನ ಬಗ್ಗೆ ಹಾಗೂ ಒಂದು ವರ್ಷದಲ್ಲಿ 1,600 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ವಿವರಗಳನ್ನು ಕೊಟ್ಟಿದ್ದು ಒಳ್ಳೆಯದಾಯಿತು. ನೀರಿಗಾಗಿ ನಿನ್ನ ಹೋರಾಟ ಸದನದಲ್ಲಿ ಮುಂದುವರೆಯಲಿ,” ಎಂದು ದೇವೇಗೌಡ ಹಾರೈಸಿದ್ದಾರೆ ಎನ್ನಲಾಗಿದೆ.

“ವಿಚಾರವನ್ನು ಮಂಡಿಸುವ ಭರಾಟೆಯಲ್ಲಿ ಉದ್ವೇಗಕ್ಕೆ ಒಳಗಾಗಬೇಡ. ನಿನ್ನ ವಿಚಾರವನ್ನು ಪರಿಪೂರ್ಣವಾಗಿ ಮಂಡಿಸು. ನಿನ್ನ ವಾದ ಪರಿಣಾಮಕಾರಿಯಾಗಬೇಕು. ಕಾರಣ, ಜೆಡಿಎಸ್‌ನಿಂದ ನಿನೊಬ್ಬನೇ ಸಂಸದ. ಕಾಂಗ್ರೆಸ್​​ನಿಂದಲೂ ಒಬ್ಬರೇ ಸಂಸದರಿರುವುದು. ಅವರ ಮೇಲೆ ನಂಬಿಕೆ ಇರಲಿ. ಕಾವೇರಿ, ಕೃಷ್ಣ ನದಿ ನೀರು ನಮ್ಮ ಹಕ್ಕು ಎಂಬುದನ್ನು ಮಂಡಿಸು,” ಎಂದು ಕಿವಿಮಾತು ಹೇಳಿದ್ದಾರೆ.

ಮಾತಿನ ಮಧ್ಯೆ ಬೇರೆಯ ವಿಚಾರ ಪ್ರಸ್ತಾಪಿಸಬೇಡ ಎಂದಿರುವ ಗೌಡರು, “ಮಾತನಾಡುವಾಗ ಐಎಂಎ ಹಗರಣ ಪ್ರಸ್ತಾಪಿಸಿದೆ. ಹಾಗೇ ಮಾತಿನ ಮಧ್ಯೆ ಮತ್ತೊಂದು ವಿಚಾರ ಪ್ರಸ್ತಾಪಿಸಬೇಡ. ಆತುರವಿಲ್ಲದೇ ವಿಚಾರ ಪ್ರಸ್ತಾಪಿಸು. ನೀರಿನ ಹೋರಾಟ, ರೈತರ ಆತ್ಮಹತ್ಯೆ ಎರಡು ಕೂಡ ಪರಿಣಾಮಕಾರಿ ವಿಚಾರ. ರಾಜ್ಯದಲ್ಲಿ ಬರಗಾಲವಿದೆ. ಕೇಂದ್ರ ಸರ್ಕಾರದ ಸಹಾಯ ಬೇಕೇ ಬೇಕು ಎಂದು ಪ್ರತಿಪಾದಿಸು," ಎಂದರು. ಎಚ್​​ಡಿ ದೇವೇಗೌಡರ ಮಾತನ್ನು ಕೇಳಿ ಪ್ರಜ್ವಲ್ ರೇವಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

Comments