ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ದಲಿತ ಸಮುದಾಯದ ನಾಯಕರಿಗೆ ಪಕ್ಷದ ಸಾರಥ್ಯ ಸಿಗುವ ನಿರೀಕ್ಷೆ ಇದೆ. ಎರಡು ದಿನದಲ್ಲಿ ಈ ಕುರಿತು ಆದೇಶ ಪ್ರಕಟವಾಗಲಿದೆ. ಗುರುವಾರ ಜೆಡಿಎಸ್ ರಾಜ್ಯ ಮಹಿಳಾ ಘಟಕಕ್ಕೆ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ದೇವೇಗೌಡರು ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಮಧು ಬಂಗಾರಪ್ಪ ಮತ್ತು ವೈ.ಎಸ್.ವಿ.ದತ್ತಾ ಅವರ ಹೆಸರುಗಳು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿತ್ತು. ಈಗ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರ ಹೆಸರು ಕೇಳಿ ಬರುತ್ತಿದೆ. ದೇವೇಗೌಡರು ಸಹ ಕುಮಾರಸ್ವಾಮಿ ಅವರ ಪರವಾಗಿ ಹೆಚ್ಚು ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
'ಪಕ್ಷದಿಂದ ಆರು ಮಂದಿ ಪರಿಶಿಷ್ಟ ಶಾಸಕರು ಗೆದ್ದಿದ್ದಾರೆ. ದಲಿತರಿಗೆ ದೇವೇಗೌಡರು ಏನೂ ಮಾಡಿಲ್ಲ ಎಂಬ ಅಸಮಾಧಾನವಿದೆ. ಹೀಗಾಗಿ ಪರಿಶಿಷ್ಟ ಸಮುದಾಯದ ನಾಯಕರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಚಿಂತನೆಯಲ್ಲಿದ್ದೇನೆ' ಎಂದು ದೇವೇಗೌಡರು ಹೇಳಿದ್ದಾರೆ. ಮಧು ಬಂಗಾರಪ್ಪ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥರು, ಅರ್ಹ ವ್ಯಕ್ತಿ. ಪಕ್ಷದ ನಾಯಕರ ಸಭೆಯನ್ನು ಕರೆದು 2-3 ದಿನದಲ್ಲಿ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ದೇವೇಗೌಡರು ತಿಳಿಸಿದರು.
ಸಕಲೇಶಪುರ ಮೀಸಲು ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರ ಜೊತೆಗೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಅವರ ಹೆಸರು ಸಹ ಕೇಳಿಬಂದಿದೆ. ಇಬ್ಬರಲ್ಲಿ ಒಬ್ಬರಿಗೆ ಸಾರಥ್ಯ ಸಿಗಲಿದೆ ಎಂಬುದು ಗುರುವಾರ ಕೇಳಿ ಬರುತ್ತಿರುವ ಸುದ್ದಿ.
Comments
Post a Comment