ಆರ್.ಎಸ್.ಎಸ್ ಎಂಬುದು ಕೇವಲ ಒಂದು ಸಂಘಟನೆಯಲ್ಲ. ಭಾರತೀಯರನ್ನ ಒಗ್ಗೂಡಿಸಿಕೊಂಡು, ರಾಷ್ಟ್ರೀಯತೆಯನ್ನು ಜಾಗೃತಗೊಳಿಸುತ್ತಾ, ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡು ಬಂದ ದೊಡ್ಡ ಸಂಘವಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ ಇನ್ನೇನು ಕೆಲವೇ ವರ್ಷಗಳಲ್ಲಿ ಶತಮಾನವಾಗಲಿದೆ. ಇಲ್ಲಿ ಬೆಳೆದ ಒಬ್ಬೊಬ್ಬನು ದೇಶಾಭಿಮುಖಿಯಾಗಬಲ್ಲನು. ಇಂದಿನವರೆಗೆ ಇದಕ್ಕೆ ಪೈಪೋಟಿ ನೀಡುವ ಯಾವುದೇ ಸಂಘಟನೆಗಳು ಭಾರತದಲ್ಲಿ ಹುಟ್ಟಿಲ್ಲ.
ಕೇಶವ ಬಲಿರಾಮ ಹೆಡಗೆವಾರ್ ರಿಂದ ಸ್ಥಾಪನೆಯಾದ ಆರ್.ಎಸ್.ಎಸ್. ನಲ್ಲಿ ಸರಸಂಘಚಾಲಕ ಎನ್ನುವ ಹುದ್ದೆಯೇ ಅತ್ಯಂತ ಮಹತ್ವದ್ದು. ಆ ನಂತರದ ಸ್ಥಾನ ಸರಕಾರ್ಯವಾಹ. ಸದ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮೋಹನ್ ಭಾಗವತ್ ರವರು ಸರಸಂಘಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಭೈಯಾಜಿ ಜೋಷಿಯವರು ಸರಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅವರು ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಕ್ಕೆ ನಮ್ಮ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಆಯ್ಕೆ ಯಾಗುವ ನಿರೀಕ್ಷೆ ಇದೆ.
ಕರ್ನಾಟಕದ ನಾಯಕ ದತ್ತಾತ್ರೇಯ ಹೊಸಬಾಳೆ:
ದತ್ತಾತ್ರೇಯ ಹೊಸಬಾಳೆಯವರು ಆರ್.ಎಸ್.ಎಸ್ ನ ಎರಡನೇ ಅತ್ಯುನ್ನತ ಹುದ್ದೆಗೇರುವುದು ಬಹುತೇಕ ಖಚಿತವಾಗಿದೆ. ಶಿವಮೊಗ್ಗದ ಸೊರಬ ತಾಲೂಕಿನ ಇವರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ನಾಯಕ. ಒಂದು ಕಾಲದಲ್ಲಿ ಆರ್.ಎಸ್.ಎಸ್ ನ ಸಾಮಾನ್ಯ ಕಾರ್ಯಕರ್ತರಾಗಿದ್ದ ಇವರು ಇದೀಗ ಆರ್.ಎಸ್.ಎಸ್. ನ ಎರಡನೇ ಉನ್ನತ ಹುದ್ದೆಗೆ ಏರಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ 9 ರಿಂದ ನಾಗಪುರದಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಜ ಸಭೆಯಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.
ದತ್ತಾತ್ರೇಯ ಅವರಿಗಿದೆ ಮೋದಿ ಬಲ:
ದತ್ತಾತ್ರೇಯ ಹೊಸಬಾಳೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಪ್ತರಾಗಿದ್ದಾರೆ. ಅಮಿತ್ ಷಾ ಅವರಿಗೂ ಆತ್ಮೀಯರು. ಹಾಗಾಗಿ ದತ್ತಾತ್ರೇಯ ಹೊಸಬಾಳೆಯವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಎಬಿವಿಪಿ ಸಂಘಟನೆಯನ್ನ ರಾಷ್ಟ್ರದೆಲ್ಲೆಡೆ ಬಲಪಡಿಸಿದವರಲ್ಲಿ ಪ್ರಮುಖರು ದತ್ತಾತ್ರೇಯ ಅವರು. ಪ್ರಸ್ತುತ ಮೋದಿ ಸರ್ಕಾರ ಹಾಗೂ ಆರ್.ಎಸ್.ಎಸ್.ನ ನಡುವಿನ ಸಮನ್ವಯಕಾರರಾಗಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. 60 ವರ್ಷದ ದತ್ತಾತ್ರೇಯ ಅವರು ಅತ್ಯಂತ ಕ್ರಿಯಾಶೀಲ ನಾಯಕರಾಗಿದ್ದು ಯುವಕರನ್ನು ಸಂಘಟಿಸುವ ಚಾಣಕ್ಯರಾಗಿದ್ದಾರೆ. 2019 ರ ಚುನಾವಣೆ ಹಾಗು 2025 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಸಂಭ್ರಮವಿದ್ದು, ಈ ಸಂದರ್ಭದಲ್ಲಿ ದತ್ತಾತ್ರೇಯ ರವರ ಆಯ್ಕೆ ಅತ್ಯಂತ ಮಹತ್ವವೆನಿಸಿದೆ.
Comments
Post a Comment