ಹಣಕಾಸು ಸಚಿವರಾಗಿ ಮತ್ತೊಂದು ಹೊಸ ದಾಖಲೆ ಬರೆದ ನಿರ್ಮಲಾ ಸೀತಾರಾಮನ್​.?

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​ ಅವರಿಗೆ ಮೋದಿ ಸಂಪುಟದಲ್ಲಿ ಹಣಕಾಸು ಖಾತೆ ನೀಡಲಾಗಿದೆ. ಹೀಗಾಗಿ ಭಾರತದ ಮೊದಲ ಮಹಿಳಾ ಹಣಕಾಸು ಖಾತೆ ಸಚಿವೆ ಎಂಬ ಖ್ಯಾತಿ ನಿರ್ಮಲಾ ಸೀತಾರಾಮನ್ ಅವರದ್ದಾಗಲಿದೆ. ರಕ್ಷಣಾ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ ಮೋದಿ-2.0 ಸರ್ಕಾರದ ಸಂಪುಟದಲ್ಲಿ ಈ ಬಾರಿಯೂ ಅತ್ಯಂತ ಜವಬ್ದಾರಿಯುತ ಹುದ್ದೆ ನೀಡಲಾಗಿದೆ.

ಸುಷ್ಮಾ ಸ್ವರಾಜ್ ರ ನಂತರ ಈ ಉನ್ನತ ಹುದ್ದೆ ಪಡೆದ ಮಹಿಳೆ ಎಂಬುದು ಇವರ ಹೆಗ್ಗಳಿಕೆಯಾಗಿದೆ. 1970-71 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಣಕಾಸು ಖಾತೆಯನ್ನು ಯಾರಿಗೂ ಹಂಚದೆ ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಆ ನಂತರ 1971-75 ವರೆಗೆ ಯಶವಂತ ರಾವ್ ಚೌಹಾಣ್ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 70-71 ರ ಅವಧಿಯನ್ನು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ವಿತ್ತ ಖಾತೆಯನ್ನು ನಿರ್ವಹಿಸಲಿದ್ದಾರೆ.

ಮದುರೈನ ತಮಿಳು ಐಯ್ಯಂಗಾರ್ ಕುಟುಂಬದಲ್ಲಿ ಜನಿಸಿದ ನಿರ್ಮಲಾ ಸೀತಾರಾಮನ್ ತಿರುಚಿರಾಪಲ್ಲಿಯಲ್ಲಿ ಬಿ.ಎ. ಪದವಿ ಪಡೆದು, ನಂತರ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ದಿಲ್ಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಡೆದರು.

ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ ಅನುಭವವಿರುವ ನಿರ್ಮಲಾ, ಈ ಹಿಂದೆ ಕೇಂದ್ರದಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆಂಧ್ರದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕರ್ನಾಟಕ ಪ್ರತಿನಿಧಿಸುತ್ತಿದ್ದಾರೆ.

2003ರಿಂದ 2005ರ ವರೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು. 2008ರಲ್ಲಿ ಬಿಜೆಪಿ ಸೇರಿದರು. ತಮ್ಮ ವಾಕ್ಚಾತುರ್ಯದಿಂದ ಅಲ್ಪಕಾಲದಲ್ಲಿಯೇ ಪಕ್ಷದ ವಕ್ತಾರೆಯಾಗಿ ನೇಮಕಗೊಂಡರು.


Comments