ಅಂತೂ ಲೋಕಸಭೆ ಚುನಾವಣೆ ಮುಗಿದಿದೆ, ನಿರೀಕ್ಷೆಯಂತೆ ನರೇಂದ್ರ ಮೋದಿ ಅಭೂತಪೂರ್ವ ಯಶಸ್ಸು ದೊರೆತು ಮತ್ತೊಮ್ಮೆ ಪ್ರಧಾನಿ ಮಂತ್ರಿಯಾಗಿದ್ದಾರೆ. ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಬರೋಬ್ಬರಿ 25 ಸ್ಥಾನಗಳಲ್ಲಿ ಜಯಗಳಿಸಿ ಮೋದಿ ಗೆಲುವಿಗೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಅದರಲ್ಲೂ ಉತ್ತರ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಿದೆ. ಕನಕಪುರದ ಬಂಡೆ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮದ ರೂವಾರಿ ಎಂ ಬಿ ಪಾಟೀಲ್ ಹೆಸರುಗಳು ಕೆಲಸಕ್ಕೆ ಬಂದಿಲ್ಲ.
ಕರ್ನಾಟಕದಲ್ಲಿ ಇಂತಹ ಅಭೂತಪೂರ್ವ ಗೆಲುವಿಗೆ ಕಾರಣರಾರು ಎಂಬುದು ಈಗ ಚರ್ಚೆಯ ವಿಷಯ. ಕೆಲವರು ಮೋದಿ ಅಲೆ ಎಂದರೆ ಇನ್ನು ಕೆಲವರು ಯಡಿಯೂರಪ್ಪನವರ ನಾಯಕತ್ವ ಎಂದು ಹೇಳುತ್ತಿದ್ದಾರೆ. ಇವರುಗಳ ಮಧ್ಯೆ ಇನ್ನೊಂದು ಗುಂಪು ಬಿ ಎಲ್ ಸಂತೋಷ್ ರವರು ಕಾರಣ ಎಂದರೆ ಇನ್ನೂ ಕೆಲವರು ಚಕ್ರವರ್ತಿ ಸೂಲಿಬೆಲೆಯವರು ಕಾರಣ ಎನ್ನುತ್ತಿದ್ದಾರೆ. ಹಾಗಾದರೆ ಈ ಜಯಕ್ಕೆ ಕಾರಣರಾದವರು ಯಾರು ಎಂಬುದನ್ನು ಇಲ್ಲಿ ವಿಶ್ಲೇಷಿಸೋಣ.
ಯಡಿಯೂರಪ್ಪ:
ಯಡಿಯೂರಪ್ಪ ಕರ್ನಾಟಕದ ಮಾಸ್ ಲೀಡರ್, ಈ ಮಾತು ಕೆಲವರಿಗೆ ಕಹಿ ಎನಿಸಬಹುದು ಆದರೆ ಇದು ಸತ್ಯ. ಈ ಇಳಿ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡುವುದು ಸುಲಭವಲ್ಲ. ಇಂದು ಕರ್ನಾಟಕ ಯಶಸ್ಸಿಗೆ ಪ್ರಮುಖ ಕಾರಣ ಇವರೇ, ಅದರಲ್ಲೂ ಉತ್ತರ ಕರ್ನಾಟಕ ಭಾಗದ ಯಶಸ್ಸಿಗೆ ಇವರ ಶ್ರಮ ಬಹಳಷ್ಟಿದೆ. ಕರ್ನಾಟಕ ಬಿಜೆಪಿಯ ಅತಿ ದೊಡ್ಡ ದೌರ್ಬಲ್ಯವೆಂದರೆ ಒಳಜಗಳಗಳು. ಆದರೆ ಲೋಕಸಭಾ ಚುನಾವಣೆ ಘೋಷಣೆ ಆದಾಗಿನಿಂದ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಎಡವಟ್ಟಿನಿಂದ ನೀಡುವ ಹೇಳಿಕೆ ಈ ಚುನಾವಣೆಯಲ್ಲಿ ಬಹಳ ಕಡಿಮೆಯಿತ್ತು. ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ್ ಖರ್ಗೆಯನ್ನು ಮಣ್ಣು ಮುಕ್ಕಿಸಿದ್ದು ಯಡಿಯೂರಪ್ಪ ಮತ್ತು ಅಮಿತ್ ಶಾ ತಂತ್ರವೇ ಹೊರತು ಮತ್ತೇನು ಅಲ್ಲ. ಕಳೆದ 2 ವರ್ಷಗಳಿಂದ ಕರ್ನಾಟಕ ಬಿಜೆಪಿ ಇಲ್ಲಿ ಕೆಲಸ ಮಾಡಿದೆ. ವಿರೋಧಿಗಳನ್ನು ಖರ್ಗೆ ವಿರುದ್ಧ ಒಟ್ಟುಗೂಡಿಸಿ ಕಾಂಗ್ರೆಸ್ ನ ಒಳ ಜಗಳದ ಲಾಭ ಪಡೆದು ಖರ್ಗೆ ಭದ್ರ ಕೋಟೆಯನ್ನು ಮುರಿದಿದ್ದಾರೆ ಚಿಕ್ಕಬಳ್ಳಾಪುರದಲ್ಲಿ ಬಚ್ಛೆಗೌಡರನ್ನು ಕಣಕ್ಕಿಳಿಸಿದ್ದು, ಕೋಲಾರದಲ್ಲಿ ಮುನಿಸ್ವಾಮಿ ಜಯಕ್ಕೆ, ರಮೇಶ್ ಕತ್ತಿಯನ್ನು ಮನವೊಲಿಸಿ ಗೊಂದಲಗಳನ್ನು ಬಗೆಹರಿಸಿ ಯಡಿಯೂರಪ್ಪ ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಕೆಲವು ಫೆಸ್ಬೂಕ್ ವೀರರು ಯಡಿಯೂರಪ್ಪ 22 ಸ್ಥಾನಗಳನ್ನು ಗೆಲ್ಲುತ್ತೇವೆ ಅಂದಾಗ ಅವರನ್ನು ಆಡಿಕೊಂಡಿದ್ದೆ ಹೆಚ್ಚು. ಇವರೆಲ್ಲ ಕರ್ನಾಟಕವೆಂದರೆ ಬರಿ ಕರಾವಳಿ ಹಿಂದುತ್ವ ಎಂದುಕೊಂಡಿದ್ದಾರೆ ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕುತಂತ್ರ ರಣತಂತ್ರಗಳು ನಡೆಯುವಷ್ಟು ಬೇರೆಲ್ಲೂ ನಡೆಯುವುದಿಲ್ಲ. ಅಲ್ಲಿ ಯಡಿಯೂರಪ್ಪನವರ ಕಾರ್ಯವೈಖರಿ ಬೇಕೇ ಬೇಕು. ಈಗ ಗೆಲುವಿಗೆ ಬೇರೆಯವರನ್ನು ಹೊಣೆ ಮಾಡುವ ಕೆಲವರು ಕರ್ನಾಟಕದಲ್ಲಿ ಬಿಜೆಪಿ ಸೋತಿದ್ದರೆ ದಿನ ಪೂರ್ತಿ ಯಡಿಯೂರಪ್ಪನವರನ್ನು ಹಿಯಾಳಿಸುತ್ತಿದ್ದರು. ನಾನೇನು ಯಡಿಯೂರಪ್ಪನವರು ಪರಿಪೂರ್ಣ ವ್ಯಕ್ತಿ ಅಂತ ಹೇಳಲ್ಲ ಆದರೆ ಎಲ್ಲರೂ ಆಡಿಕೊಳ್ಳುವಂತ ಕೆಟ್ಟ ವ್ಯಕ್ತಿಯು ಅಲ್ಲ. ಹೌದು ಕೆಲವು ತಪ್ಪುಗಳು ನಡೆದಿವೆ ಆದರೆ ಅದನ್ನು ತಿದ್ದಿಕೊಂಡಾಗಲೂ ಮತ್ತೆ ಹಳೆಯದನ್ನೇ ಎಳೆದರೆ ಹೇಗೆ ಅಲ್ಲವೇ?
ಬಿಎಲ್ ಸಂತೋಷ್ :
ಇವರು ಸಂಘದ ನಿಷ್ಠಾವಂತ ಕಾರ್ಯಕರ್ತ. ಶ್ರದ್ದೆ ಶಿಸ್ತು, ನಿಸ್ವಾರ್ಥ, ಪ್ರಾಮಾಣಿಕತೆ ಇವುಗಳೇ ಇವರ ಆಸ್ತಿಗಳು. ಮದುವೆಯಾಗಿಲ್ಲ, ಊರೂರು ಸುತ್ತಿ ಸಂಘಟನೆ ಮಾಡುವುದು, ಕಾರ್ಯಕರ್ತರನ್ನು ಸಂಘಟಿಸಿ ಪಕ್ಷಕ್ಕೆ ದುಡಿಯುವಂತೆ ಮಾಡುವುದೇ ಇವರ ಕೆಲಸ. ಇವರಿಗೆ ಕೆಲವು ಜಾತಿವಾದಿಗಳು ಇನ್ನು ಕೆಲವು ಯಡಿಯೂರಪ್ಪನವರ ಭಕ್ತರು ಇವರನ್ನು ವಿಘ್ನ ಸಂತೋಷಿ, ಕುತಂತ್ರಿ ಎಂದು ಕರೆಯುವುದಾದರೂ, ಇವುಗಳೆಲ್ಲ ತಪ್ಪು ಕಲ್ಪನೆಗಳೇ. ಇವರ ಬಗ್ಗೆ ಬಹುತೇಕ ಕಾರ್ಯಕರ್ತರಲ್ಲಿ ಒಳ್ಳೆಯ ಭಾವನೆಯಿದೆ. ಸಂಘಟನೆ ಬಗ್ಗೆ ವಿಶ್ವಾಸವು ಇದೆ. ಯಡಿಯೂರಪ್ಪರವರ ಕೆಲವು ನಡೆಗಳು ಇವರಿಗೆ ಬೇಸರ ತಂದಿರಬಹುದು ಆದರೆ ಈ ಕಾಲದಲ್ಲಿ ಕೇವಲ ಪ್ರಾಮಾಣಿಕತೆ ನಿಷ್ಠೆ ಅಂತ ಹೋದರೆ ವಾಜಪೇಯಿಯವರಿಗೆ ಆದ ಗತಿಯೇ ಆಗುತ್ತದೆ, ಹಾಗಂತ ಭೃಷ್ಟಾಚಾರ ಮಾಡುವುದಲ್ಲ ಆದರೆ ಯಡಿಯೂರಪ್ಪನವರು ತಮ್ಮ ಹಿಂದೆ ಮುಂದೆ ಅಲೆದಾಡುವ ನಾಯಕರ ಬಗ್ಗೆ ಒಮ್ಮೆ ಯೋಚಿಸುವುದು ಒಳಿತು.
ಚಕ್ರವರ್ತಿಸೂಲಿಬೆಲೆ :
ಕರ್ನಾಟಕದಲ್ಲಿ ಇವರ ಬಗ್ಗೆ ಕೇಳದವರು ಯಾರಿದ್ದಾರೆ ಹೇಳಿ, ರಾಷ್ಟ್ರೀಯತೆ, ಸ್ವದೇಶಿ ಚಿಂತನೆ ಆಧ್ಯಾತ್ಮ, ಸ್ವಚ್ಚತೆ, ಯುವ ಬ್ರಿಗೇಡ್ ಎಂಬ ತಂಡ ಕಟ್ಟಿ ಉತ್ತಮ ಕೆಲಸ ಮಾಡಲು ಯುವಕರನ್ನು ಪ್ರೇರೇಪಿಸುವುದು ಸುಲಭದ ಮಾತಲ್ಲ. ಹಿಂದೂ ಧರ್ಮದ ಬಗ್ಗೆ ಏನಾದರೂ ಅಪವಾದ ಬಂದಾಗ ಎದುರಾಳಿಗಳ ಜೊತೆ ಸಮರ್ಥವಾಗಿ ವಾದ ಮಂಡಿಸುವ ಕರ್ನಾಟಕದ ಒಬ್ಬರೇ ವ್ಯಕ್ತಿ ಈ ಚಕ್ರವರ್ತಿ ಸುಲಿಬೆಲೆಯವರು. 2014 ರಲ್ಲಿ ನಮೋ ಬ್ರಿಗೇಡ್ ತಂಡ ಕಟ್ಟಿ ಮೋದಿ ಬಗ್ಗೆ ಪ್ರಚಾರ ಮಾಡಿ ಮೋದಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ 2019 ಸ್ಥಿತಿ ಹಾಗಿರಲಿಲ್ಲ, ನರೇಂದ್ರ ಮೋದಿ ಸಮರ್ಥವಾಗಿ ಆಡಳಿತವನ್ನೇನೋ ನಿಭಾಯಿಸಿದ್ದರು ಆದರೆ ಅದನ್ನು ಜನರಿಗೆ ತಲುಪಿಸುವ ಸಂಸದರು ಗಾಡನಿದ್ರೆಯಲ್ಲಿದ್ದರು. ಹೀಗಾಗಿ 2019 ರಲ್ಲಿ ಮತ್ತೆ ಟೀಮ್ ಮೋದಿ ತಂಡ ರಚಿಸಿ ಕರ್ನಾಟಕದ ಬಹುತೇಕ ನಗರ ಮತ್ತು ಹಳ್ಳಿಗಳಲ್ಲಿ ಸಂಚರಿಸಿ ಮೋದಿ ಪರ ಪ್ರಚಾರ ಮಾಡಿದರು. ಟಿಂ ಮೋದಿ ಕೊಟ್ಟ ಅಂಕಿ ಅಂಶಗಳ ಪ್ರಕಾರ 120 ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ 300 ಬೈಕ್ ರ್ಯಾಲಿ, 2 ಪ್ರತ್ಯೇಕ ರಥಗಳ ಯಾತ್ರೆ ಆರಂಭಿಸಿ 30 ಜಿಲ್ಲೆ 500 ಗ್ರಾಮಗಳಿಗೆ ಭೇಟಿ ನೀಡಿ 12000 ಕಿಮೀ ಈ ರಥಗಳು ಚಲಿಸಿದ್ದವು. ಇಷ್ಟೇ ಅಲ್ಲದೆ ಮೋದಿ ಹೆಸರಿನಲ್ಲಿ 500 ಕಾರ್ಯಕ್ರಮಗಳನ್ನು, 1 ಲಕ್ಷ ಕರಪತ್ರಗಳನ್ನು ಹಂಚಲಾಗಿದೆ. 3.25 ಲಕ್ಷ ಜನರನ್ನು ನೇರಾ ನೇರ ಭೇಟಿ ಮಾಡಿ ಮೋದಿ ಸಾಧನೆಗಳನ್ನು ವಿವರಿಸಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾ ಮೂಲಕ 1 ಕೋಟಿ ಜನರನ್ನು ತಲುಪಿದ್ದಾರೆ. ಇದೆಲ್ಲಾ ಸಾಮಾನ್ಯ ಸಾಧನೆಯಾ? ಯಡಿಯೂರಪ್ಪನವರಿಗೆ ಪಕ್ಷವಿದೆ. ಸಂತೋಷ್ ರವರಿಗೆ ಸಂಘವಿದೆ ಆದರೆ ಈ ವ್ಯಕ್ತಿಗೆ ಏನಿದೆ ಕೇವಲ ನಿಸ್ವಾರ್ಥ ಕಾರ್ಯವೊಂದೇ. ಇವರು ಪ್ರಚಾರಕ್ಕಾಗಿ ಕರ್ನಾಟಕ ತಿರುಗಿದಷ್ಟು ಕೆಲವು ಬಿಜೆಪಿ ನಾಯಕರೇ ತಿರುಗಿಲ್ಲ. ಇಂತಹ ವ್ಯಕ್ತಿಯ ಬಗ್ಗೆ ಕೆಲವರು ಕೆಟ್ಟದಾಗಿ ಮಾತಾನಾಡುತ್ತಾರೆ ಎಂದರೆ ಅವರಷ್ಟು ಕೃತಘ್ನರು ಬೇರಾರು ಇಲ್ಲ.
ಹಾಗಾದರೆ ಕರ್ನಾಟಕದ ಗೆಲುವಿಗೆ ಕಾರಣರಾರು? ಅನುಮಾನವೇ ಇದಕ್ಕೆಲ್ಲ ಮೋದಿ ಮಾಡಿದ ಕೆಲಸವೇ ಕಾರಣ. ಮೋದಿ ಯೋಜನೆಗಳು ಪ್ರತಿ ಮನೆಯನ್ನು ಮುಟ್ಟಿವೆ. ಎಷ್ಟೋ ಸಾವಿರ ಹಳ್ಳಿಗಳು ಮೊದಲ ಬಾರಿಗೆ ಬೆಳಕು ಕಂಡಿವೆ. ಬಡವರ ಮನೆ ಬಾಗಿಲಿಗೆ ಸಿಲಿಂಡರ್ ಬಂದಿವೆ. ಆರೋಗ್ಯಕ್ಕೆ ವಿಮೆ ಬಂದಿದೆ. ದೇಶ ರಕ್ಷಣೆಯಾಗಿದೆ. ಬೆಲೆ ಇಳಿಕೆಯಾಗಿದೆ. ಜನತೆಗೆ ಮೋದಿ ಮೇಲಿನ ಭರವಸೆಯೇ ಈ ಗೆಲುವಿಗೆ ಕಾರಣ. ಇದಾದ ನಂತರ ಈ ಮೂವರು ಮಾಡಿದ ಕೆಲಸಗಳೇ ಕರ್ನಾಟಕದಲ್ಲಿ ಬಿಜೆಪಿಗೆ 25 ಸ್ಥಾನಗಳನ್ನು ಕೊಡಿಸಿದೆ. ಇದು ಸಂಘಟಿತ ಹೋರಾಟ. ಇಲ್ಲಿ ಪಕ್ಷದ ಸಂಘಟನೆಗೆ ಯಡಿಯೂರಪ್ಪ ಬೇಕು. ರಾಜಕೀಯ ವ್ಯಕ್ತಿಗಳು ತಮ್ಮ ಆದರ್ಶವನ್ನು ಬದಿಗಿಟ್ಟು ರಾಜಕೀಯ ಮಾಡುವಾಗ ಬುದ್ಧಿ ಹೇಳಲು ಸಂತೋಷ್ ಅಂತವರು ಬೇಕು. ರಾಜ್ಯದಲ್ಲಿ ಯುವಕರಿಗೆ ಸಂಸ್ಕಾರ, ದೇಶ ಭಕ್ತಿ ತುಂಬಲು ಚಕ್ರವರ್ತಿಯಂತವರು ಬೇಕು. ಮೋದಿ ಅಲೆ ಹಾಗೂ ಈ ಮೂವರ ಪರಿಶ್ರಮದ ಫಲವೇ ಇಂದಿನ ಯಶಸ್ಸು.
Reference: ಮಾಧ್ಯಮ
Comments
Post a Comment