ಇದೀಗ ಬಂದ ಸುದ್ದಿ: ಮತ್ತೊಂದು ಐತಿಹಾಸಿಕ ಕಾರ್ಯಕ್ರಮ ಮಾಡಲು ಸಜ್ಜಾದ ಸಿದ್ದರಾಮಯ್ಯ.?

ಧಾನಸಭೆ ವಿರೋಧ ಪಕ್ಷದ ನಾಯಕ ಆಯ್ಕೆಯ ವಿಳಂಬಕ್ಕೆ ಟಾಂಗ್ ನೀಡಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕಾಂಗ ಸಭೆ ಕರೆಯುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸೆ.18ರಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಭಾಗವಹಿಸಲಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿ ಮತ್ತು ಸರ್ಕಾರ ತೆಗೆದುಕೊಂಡಿರುವ ಪರಿಹಾರ ಕ್ರಮಗಳು, ರಾಜ್ಯದ ಹಲವಾರು ಜಿಲ್ಲೆಯಲ್ಲಿ ಉಂಟಾಗಿರುವ ಬರಪರಿಸ್ಥಿತಿ ಹಾಗೂ ಸರ್ಕಾರ ಒದಗಿಸಿರುವ ನೆರವು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಆಗುತ್ತಿರುವ ತಾರತಮ್ಯ ಹಾಗೂ ಅನುದಾನ ಕಡಿತದ ಬಗ್ಗೆ ಚರ್ಚಿಸುವುದಾಗಿ ಸಿದ್ದರಾಮಯ್ಯ ಸಭೆಯ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಬೆಂಗಳೂರು ನಗರದ ಶಾಸಕರಿಗೆ, ಬಿಬಿಎಂಪಿ ಸದಸ್ಯರಿಗೆ, ಹೈದರಾಬಾದ್-ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಈ ಹಿಂದಿನ ಸರ್ಕಾರಗಳು ಮಂಜೂರು ಮಾಡಿದ ಅನುದಾನವನ್ನು ಕಡಿತ ಮಾಡಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮರುಹಂಚಿಕೆ ಮಾಡಿದೆ. ರಾಜ್ಯದಲ್ಲಿ ನೆರೆ ಮತ್ತು ಪ್ರವಾಹದಿಂದಾಗಿ 22 ಜಿಲ್ಲೆಗಳು ಹೈರಾಣವಾಗಿವೆ. 2ನೇ ಹಂತದ ಪ್ರವಾಹದಿಂದಾಗಿ ಮುಂಬೈ ಕರ್ನಾಟಕದ ಬಹಳಷ್ಟು ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.

ಆದರೆ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಗಳ ತಾತ್ಕಾಲಿಕ ಪರಿಹಾರ ನೀಡಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಆರ್ಥಿಕ ನೆರವು ನೀಡಿಲ್ಲ. ಕೇಂದ್ರ ಸರ್ಕಾರವಂತೂ ನೆರೆ ಪರಿಸ್ಥಿತಿಗೆ ಒಂದು ಬಿಡಿಗಾಸು ಹಣವನ್ನೂ ಕೊಟ್ಟಿಲ್ಲ. ರಾಜ್ಯದ ಸುಮಾರು 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಪರಿಸ್ಥಿತಿ ಇದೆ.

ಒಂದೆಡೆ ಅತಿವೃಷ್ಟಿಯಾದರೆ ಮತ್ತೊಂದೆಡೆ ಮಳೆಯಿಲ್ಲದೆ ಬೆಳೆಗಳು ಒಣಗಿ ಹೋಗಿವೆ. ಬಿತ್ತಿದ ಬೆಳೆಗಳು ಕಮರಿ ಹೋಗಿವೆ. ಆದರೆ ರಾಜ್ಯ ಸರ್ಕಾರ ಬರ ನಿರ್ವಹಣೆಗೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ಕಾಂಗ್ರೆಸ್ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಿದೆ. ಈ ಕುರಿತು ಚರ್ಚಿಸಲು ಸಭೆ ಕರೆದಿರುವುದಾಗಿ ಮೂಲಗಳು ತಿಳಿಸಿವೆ.

ಇದಕ್ಕಿಂತಲೂ ಪ್ರಮುಖವಾಗಿ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ವಿಳಂಬ ಮಾಡುತ್ತಿದೆ. ಸದರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯನವರು ಸತತ ಪ್ರಯತ್ನ ನಡೆಸಿದರೂ ಹೈಕಮಾಂಡ್ ಅಧಿಕೃತವಾಗಿ ಪ್ರಕಟಣೆ ಮಾಡುತ್ತಿಲ್ಲ. ಮೂಲ ಕಾಂಗ್ರೆಸಿಗರು ವಿಪಕ್ಷ ನಾಯಕನ ಆಯ್ಕೆಗೆ ಅಡ್ಡಗಾಲಾಗಿದ್ದಾರೆ. ಹೀಗಾಗಿ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುವ ಮೂಲಕ ತಮ್ಮ ಬಲಾಬಲವನ್ನು ಸಾಬೀತುಪಡಿಸಿ ಹೈಕಮಾಂಡ್‍ಗೆ ಸಂದೇಶ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಬಹುತೇಕ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರ ಪರ ಒಲವು ಹೊಂದಿದ್ದು, ಯಾರೊಬ್ಬರೂ ಬಹಿರಂಗವಾಗಿ ಬಾಯ್ಬಿಟ್ಟು ಹೇಳುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆ ಕರೆದರೆ ಸಹಜವಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಚರ್ಚೆಯಾಗಲಿದೆ. ಶಾಸಕರು ತಮ್ಮ ಅಭಿಪ್ರಾಯವನ್ನು ಹೇಳಲಿದ್ದಾರೆ. ಅದನ್ನು ಅಧಿಕೃತವಾಗಿ ದಾಖಲು ಮಾಡಿ, ಹೈಕಮಾಂಡ್‍ಗೆ ರವಾನಿಸುವ ಮೂಲಕ ತಮ್ಮ ಪ್ರಭಾವದ ಬಗ್ಗೆ ಮನವರಿಕೆ ಮಾಡಿಕೊಡುವ ಕಾರ್ಯತಂತ್ರವನ್ನು ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ.

ವಿಧಾನಸಭೆ ಅಧಿವೇಶನ ನಡೆಯದ ಹೊತ್ತಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿರುವುದು ಅಚ್ಚರಿಗೆ ಕಾರಣವಾಗಿದೆ. 2008ರಿಂದಲೂ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕರಾಗಿದ್ದಾರೆ. ಸರಿಸುಮಾರು 12 ವರ್ಷಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ವಿಧಾನಸಭೆ ಅಧಿವೇಶನ ನಡೆಯುವ ವೇಳೆಯಲ್ಲಿಯೇ ಹೆಚ್ಚಾಗಿ ಕರೆಯಲಾಗಿದೆ. ಒಂದೆರಡು ಬಾರಿ ಗಂಭೀರ ಪರಿಸ್ಥಿತಿಗಳು ಮತ್ತು ವಿಶೇಷ ಸಂದರ್ಭದಲ್ಲಿ ಮಾತ್ರ ಅಧಿವೇಶನ ಇಲ್ಲದ ಹೊತ್ತಿನಲ್ಲಿ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ.

ಆದರೆ ಈ ಬಾರಿ ವಿಪಕ್ಷ ನಾಯಕನ ಆಯ್ಕೆಗೆ ಹಲವು ತೊಡರುಗಳು ಎದುರಾಗಿರವ ಹಿನ್ನೆಲೆಯಲ್ಲಿ ವಿಭಿನ್ನ ಕಾರ್ಯತಂತ್ರ ಅನುಸರಿಸುತ್ತಿರುವ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದಿರುವುದು ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ.

Comments