ದೇಶ ಮತ್ತೊಮ್ಮೆ ಮೋದಿ ಅವರನ್ನು ತನಗಾಗಿ ಆರಿಸಿಕೊಂಡಿದೆ. ಬರೋಬ್ಬರಿ 303 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಗೆದ್ದಿದೆ. ಬಿಜೆಪಿಯ ಮೈತ್ರಿಕೂಟ ಎನ್‌ಡಿಎ 353 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಸರ್ಕಾರವೊಂದು ಪೂರ್ಣಾವಧಿ ಪೂರ್ಣಗೊಳಿಸಿದ ಬಳಿಕವೂ ಇಷ್ಟು ದೊಡ್ಡ ಜಯವನ್ನು ಸಾಧಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಹಾಗೆ ನೋಡಿದರೆ 2014 ರಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಕ್ಷೇತ್ರವನ್ನೇ ಈ ಬಾರಿ ಗೆದ್ದಿದೆ. ಎನ್‌ಡಿಎ ಕೂಡ. ಇದು ಸುಸ್ಪಷ್ಟವಾಗಿ ತೋರುತ್ತದೆ, ಬಿಜೆಪಿ ಪರ, ಮೋದಿಯ ನಾಯಕತ್ವದ ಪರ, ಆಡಳಿತ ವೈಖರಿಯ ಪರ ಜನರಿದ್ದಾರೆ ಎಂದು.
ಕಾಂಗ್ರೆಸ್ ಒಂದೊಮ್ಮೆ ಬಿಜೆಪಿ ಇಂದು ಗಳಿಸಿರುವ ಗೆಲುವಿಗಿಂತಲೂ ದೊಡ್ಡ ಗೆಲುವನ್ನು ಪಡೆದಿತ್ತು. ಆದರೆ ಬಿಜೆಪಿಯ ಗೆಲುವು ಅದಕ್ಕಿಂತಲೂ ಭಿನ್ನ ಮತ್ತು ಒಂದು ರೀತಿಯಾಗಿ ಉತ್ಕೃಷ್ಟವೂ ಹೌದು. ಬಿಜೆಪಿ ಸಂಘಟನೆಯಲ್ಲಿ ನಂಬಿಕೆ ಇಟ್ಟುಕೊಂಡು ಬಂದಿರುವ, ಪಕ್ಷ ಹುಟ್ಟಿದಾಗಿನಿಂದಲೂ ಏಕ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಾ ಬಂದಿರುವ ಪಕ್ಷ. 1984ರಲ್ಲಿ ಲೋಕಸಭೆಯಲ್ಲಿ ಇದ್ದದ್ದು ಬಿಜೆಪಿಯ ಇಬ್ಬರು ಸಂಸದರಷ್ಟೆ! ಗುಜರಾತ್‌ನ ಮೆಹಸೇನಾದಿಂದ ಎ.ಕೆ.ಪಟೇಲ್ ಗೆದ್ದಿದ್ದರೆ, ಆಂಧ್ರ ಪ್ರದೇಶದ ಹನಮಕೊಂಡ ಕ್ಷೇತ್ರದಿಂದ ಚಂದುಪಟ್ಲ ಜಗ ರೆಡ್ಡಿ ಅವರು ಚುನಾವಣೆ ಗೆದ್ದಿದ್ದರು. ಆ ಬಾರಿ ಸಂಸತ್ತಿನಲ್ಲಿ ಕಾಂಗ್ರೆಸ್‌ನ 426 ಸಂಸದರಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರೇ ಆ ಬಾರಿ ಸೋತು ಬಿಟ್ಟಿದ್ದರು. ಇಡೀಯ ದೇಶದಲ್ಲಿ ಕಾಂಗ್ರೆಸ್ ಭಾರಿ ಜಯಭೇರಿ ಭಾರಿಸಿತ್ತು. ಮುಂದೆ ಓದಿ
1989ರಲ್ಲಿ 85 ಸ್ಥಾನಗಳಲ್ಲಿ ಗೆಲುವು ಆದರೆ 1984ರ ನಂತರ ಬಿಜೆಪಿ ಹಿಂತಿರುಗಿ ನೋಡಲೇ ಇಲ್ಲ. 1986 ರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರು ಪಕ್ಷದ ಜವಾಬ್ದಾರಿ ಹೊತ್ತುಕೊಂಡರು. 1989ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ 85 ಮಂದಿ ಆಯ್ಕೆ ಆಗಿ ಲೋಕಸಭೆಗೆ ಬಂದರು. ಲಾಲ್ ಕೃಷ್ಣ ಆಡ್ವಾಣಿಯವರು ಪಕ್ಷಕ್ಕೆ ಅದಾಗಲೆ ಹೊಸ ಹುರುಪು ತಂದುಬಿಟ್ಟಿದ್ದರು. ವಾಜಪೇಯಿ ಅವರು ರಾಷ್ಟ್ರ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದು ಇದೇ ಸಮಯದಲ್ಲಿ.
1991ರಲ್ಲಿ ನೂರು ಸಂಖ್ಯೆ ದಾಟಿದ ಬಿಜೆಪಿ ನಂತರ 1991 ರಲ್ಲಿ ಬಿಜೆಪಿ ಮೊದಲ ಬಾರಿಗೆ ನೂರರ ಸಂಖ್ಯೆ ದಾಟಿ 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 244 ಸ್ಥಾನಗಳಲ್ಲಿ ಗೆಲುವು ಸಿಕ್ಕಿತ್ತು, ಈ ಲೋಕಸಭೆ ಅವಧಿಯಲ್ಲಿ ವಿಶ್ವನಾಥ ಪ್ರತಾಪ್ ಸಿಂಗ್ ಮತ್ತು ಚಂದ್ರಶೇಖರ್ ಅವರು ಪ್ರಧಾನಿಗಳಾದರು.
1996ರಲ್ಲಿ ಮೊದಲಬಾರಿಗೆ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನ 1996 ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷವು ಕಾಂಗ್ರೆಸ್‌ಗಿಂತಲೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿತು, ಅಷ್ಟೆ ಅಲ್ಲದೆ ಪಕ್ಷ ಸ್ಥಾಪನೆಯಾದ ನಂತರ ಮೊದಲ ಬಾರಿಗೆ ಅಧಿಕಾರಕ್ಕೆ ಸಹ ಬಂದಿತು. ಆ ಚುನಾವಣೆಯಲ್ಲಿ ಬಿಜೆಪಿ 161 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್ ಕೇವಲ 140 ಕ್ಷೇತ್ರಗಳಲ್ಲಿ ಗೆದ್ದಿತ್ತು. ಹಲವು ಪಕ್ಷಗಳ ಬೆಂಬಲದಿಂದ ವಾಜಪೇಯಿ ಅವರು ಪ್ರಧಾನಿ ಆದರು. ಆದರೆ ಕೇವಲ 16 ದಿನ ಮಾತ್ರವೇ ಅವರು ಆ ಸ್ಥಾನದಲ್ಲಿ ಇರುವಂತಾಯಿತು. ನಂತರ ದೇವೇಗೌಡ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಾಜಪೇಯಿ ಅವರ ಐತಿಹಾಸಿಕ ಭಾಷಣ 1998 ರ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರದರ್ಶನವನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡು 182 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಕೇವಲ 141 ಕ್ಷೇತ್ರಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತು. ಈ ಬಾರಿ ವಿವಿದ ಪಕ್ಷಗಳ ಬೆಂಬಲದಿಂದ ಮತ್ತೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆದರು, ಆದರೆ ಕೇವಲ 13 ತಿಂಗಳ ಆಡಳಿತ ನಡೆಸಿದ ಬಳಿಕ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ಕೊಡಬೇಕಾಯಿತು. ಆಗ ಜಯಲಲಿತಾ ತಮ್ಮ ಎನ್‌ಡಿಎಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದರು. ಅಂದು ವಾಜಪೇಯಿ ಸಂಸತ್ ಭಾಷಣವನ್ನು ಬಿಜೆಪಿಯ ಯಾರೂ ಮರೆಯುವಂತಿಲ್ಲ. 'ನಾವೊಮ್ಮೆ ಇಬ್ಬರೇ ಇದ್ದೆವು, ಆದರೆ ನಮ್ಮ ಹಠ ಬಿಡಲಿಲ್ಲ, ನೀವಿಂದು ನಮ್ಮನ್ನು ನೋಡಿ ನಗುತ್ತಿದ್ದೀರಿ, ನಿಮಗೂ ಒಂದು ದಿನ ಇದೇ ಗತಿ ಬರುತ್ತದೆ' ಎಂದು ವಾಜಪೇಯಿ ಅಂದು ಕಾಂಗ್ರೆಸ್ಸಿಗೆ ಹೇಳಿದ್ದರು.
ವಾಜಪೇಯಿ ಯುಗ 1999 ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ 182 ಸೀಟುಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಕೇವಲ ಇನ್ನಷ್ಟು ಕುಸಿದು 114 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಎನ್‌ಡಿಎ ಮತ್ತು ಕೆಲವು ಪಕ್ಷಗಳ ಬೆಂಬಲದಿಂದ ವಾಜಪೇಯಿ ಪಿಎಂ ಆದರು. ಬಹುತೇಕ ಪೂರ್ಣಾವಧಿಯನ್ನು ಅವರು ಪೂರ್ಣಗೊಳಿಸಿದರು. ಭಾರತದ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರು ಎಂದು ಅಟಲ್ ಅವರು ಖ್ಯಾತಿಗಳಿಸಿದರು. ಅದು ಬಿಜೆಪಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಿತು.
2004-09 ರಲ್ಲಿ ಕಳೆಗುಂದಿದ್ದ ಬಿಜೆಪಿ ನಂತರ 2004 ರ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ಕಾಂಗ್ರೆಸ್ 145 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ವಾಜಪೇಯಿ ಅವರು ಅತ್ಯುತ್ತಮ ಆಡಳಿತದ ಬಳಿಕವೂ ಬಿಜೆಪಿ 138 ಕ್ಷೇತ್ರಗಳಿಗೆ ಕುಸಿಯಿತು. ಮಿತ್ರ ಪಕ್ಷಗಳ ಸಹಾಯದೊಂದಿಗೆ ಮನಮೋಹನ್ ಸಿಂಗ್ ಪ್ರಧಾನಿ ಆದರು. ನಂತರ 2009 ರ ಚುನಾವಣೆಯಲ್ಲಿ ಸಹ ಕಾಂಗ್ರೆಸ್ 206 ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿತು, ಬಿಜೆಪಿ ಇನ್ನಷ್ಟು ಕುಸಿದು 116ಕ್ಕೆ ಇಳಿಯಿತು.
ಮೋದಿ-ಶಾ ಮೋಡಿ ಆದರೆ ಅಮಿತ್ ಶಾ ಅವರು ಪಕ್ಷದ ಅಧಿಕಾರ ವಹಿಸಿಕೊಂಡ ಬಳಿಕ ಬಿಜೆಪಿಯ ದಿಕ್ಕು ಬದಲಾಯಿತು. 2014 ರ ಚುನಾವಣೆಗೆ ಮೋದಿ ಪ್ರಧಾನಿ ಅಭ್ಯರ್ಥಿಯಾದರು. ಆ ಚುನಾವಣೆಯಲ್ಲಿ ಬಿಜೆಪಿ ಒಂದೇ 282 ಕ್ಷೇತ್ರಗಳನ್ನು ಗೆದ್ದು ಬಹುಮತವನ್ನು ಗಳಿಸಿಕೊಂಡಿತು. ಮೋದಿ ಪ್ರಧಾನಿಯಾದರು, ಐದು ವರ್ಷ ಪೂರ್ಣಗೊಳಿಸಿದರು. ಮತ್ತೆ 2019 ರ ಈ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಪಡೆದಿದ್ದು, ಬಿಜೆಪಿ ಒಂದೇ 303 ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ.
Comments
Post a Comment